ದಲಿತರಿಗೆ, ಕೂಲಿ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಒತ್ತಾಯ

ಕುಶಾಲನಗರ: ಲಾಕ್ಡೌನ್ ಪರಿಣಾಮವಾಗಿ ದಲಿತರು ಹಾಗೂ ಕೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರ ಯಾವುದೇ ಪ್ಯಾಕೇಜ್ ಘೋಷಣೆ ಮಾಡದೆ ಅನ್ಯಾಯ ಎಸಗುತ್ತಿದೆ ಎಂದು ಆರೋಪಿಸಿ ಕುಶಾಲನಗರದ ಟೌನ್ ಕಾಲೋನಿ ನಿವಾಸಿಗಳು ತಮ್ಮ ತಮ್ಮ ಮನೆಯ ಮುಂಭಾಗ ನಿಂತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಭೀಮವಾದ ಸಂಘಟನೆ ಜಿಲ್ಲಾಧ್ಯಕ್ಷ ಕೆ ಪಿ ರಾಜು ದಲಿತರು ಹಾಗೂ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಮನೆಯಲ್ಲೇ ಇರುವುದರಿಂದ ಒಂದು ಸಮಯದ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಆದರೆ ಸ್ಥಳೀಯ ಪಟ್ಟಣ ಪಂಚಾಯಿತಿ ಸಹ ಸ್ಪಂದಿಸದೆ ಇರುವುದು ವಿಪರ್ಯಾಸ. ಬೇರೆಬೇರೆ ವರ್ಗಗಳಿಗೆ ರಾಜ್ಯ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿದೆ ಆದರೆ ದಲಿತರಿಗೆ ಯಾವುದೇ ರೀತಿಯ ಪ್ಯಾಕೇಜ್ ಘೋಷಣೆ ಮಾಡದಿರುವುದು ಸಮುದಾಯಕ್ಕೆ ಮಾಡಿದ ದ್ರೋಹವಾಗಿದೆ ಕೂಡಲೇ ರಾಜ್ಯ ಕೇಂದ್ರ ಸರ್ಕಾರ ದಲಿತರ ಹಾಗೂ ಕೂಲಿ ಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭ ಪ್ರತಿಭಟನೆ ನಡೆಯೋ ಸ್ಥಳಕ್ಕೆ ಠಾಣಾಧಿಕಾರಿ ಗಣೇಶ್ ಭೇಟಿ ನೀಡಿ ಕೋವಿಡ್ 19 ನಿಯಮ ಉಲ್ಲಂಘನೆ ಮಾಡುತ್ತಿದ್ದು ಪ್ರತಿಭಟನೆಗೆ ಯಾವುದೇ ಅನುಮತಿಯನ್ನು ಪಡೆಯದೆ ಇರುವುದಕ್ಕೆ ಕೆ ಪಿ ರಾಜು ಅವರನ್ನು ತರಾಟೆಗೆ ತೆಗೆದುಕೊಂಡರು ಹಾಗೂ ನಿವಾಸಿಗಳಿಗೆ ಕೂಡಲೇ ತೆರಳುವಂತೆ ಸೂಚಿಸಿ ಪ್ರತಿಭಟನೆಯನ್ನು ತೆರವುಗೊಳಿಸಿದರು.
ಈ ಸಂದರ್ಭ ನಿವಾಸಿಗಳಾದ ಪುನೀತ್ ,ಶೃತಿ ,ಕಾವೇರಿ, ಸರೋಜಮ್ಮ ,ವಿಜಾತ ,ಗೌರಮ್ಮ, ಕಮಲ ,ಪುಟ್ಟಲಕ್ಷ್ಮಿ ,ಲಕ್ಷ್ಮಿ, ಮುಂತಾದವರು ಹಾಜರಿದ್ದರು.