ಎಲ್ಲ ಪಕ್ಷಗಳನ್ನೂ ನೋಡಿ ಬಂದಿದ್ದಾರೆ; ಯೋಗೀಶ್ವರ್ ವಿರುದ್ಧ ಡಿ ಕೆ ಸುರೇಶ್ ಕಿಡಿ

ರಾಮನಗರ: ಯೋಗೇಶ್ವರ್ ಎಲ್ಲಾ ಪಾರ್ಟಿ ನೋಡಿಕೊಂಡು ಬಂದಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಮೂರು ಪಾರ್ಟಿ ಸರ್ಕಾರ ಇದೆ ಎಂದು ಹೇಳಿದ್ದಾರೆ ಎಂದು ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದ್ದಾರೆ.
ರಾಮನಗರದ ಬಿಡದಿ ಪಟ್ಟಣದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಫುಡ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು.
ವಿಜಯೇಂದ್ರ ಜೊತೆಗೆ ಡಿಕೆಶಿ ರಾಜಕೀಯ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಸಿಪಿವೈ ಹೇಳಿಕೆಗೆ ವಿಜಯೇಂದ್ರ ಜೊತೆ ಸರ್ಕಾರ ತರಲು ಪ್ಲ್ಯಾನ್ ಮಾಡಿದವರು ಯಾರು, ದೆಹಲಿಗೆ ಹೋದವರು ಯಾರು, ಶಾಸಕರಿಗೆ ಹಣ ಕೊಟ್ಟೋರು ಯಾರು, ಎಲ್ಲಾ ಮಾಹಿತಿ ಅವರ ಬಳಿಯೇ ಇದೆ. ಅದರ ಬಗ್ಗೆ ಮಾತನಾಡಲಿ ಎಂದರು.
ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡುವ ಯೋಗ್ಯತೆ, ಅವಶ್ಯಕತೆ ಇಲ್ಲ. ಏನೋ ಒಂದು ಕೆಲಸ ಕೊಟ್ಟಿದ್ದಾರೆ, ಮಂತ್ರಿ ಮಾಡಿದ್ದಾರೆ, ಮೊದಲು ಆ ಯೋಗ್ಯತೆಯನ್ನ ಉಳಿಸಿಕೊಂಡು ಹೋಗಲಿ ಅಂತಾ ಯೋಗೀಶ್ವರ್ ಗೆ ತಿರುಗೇಟು ನೀಡಿದ್ರು. ರಾಮನಗರ ಜಿಲ್ಲೆಯಲ್ಲಿ ಹೆಚ್ಡಿಕೆ – ಡಿಕೆಶಿ ಪಾರುಪತ್ಯ ಎಂಬ ಹೇಳಿಕೆಗೆ ಈ ಮಾತನ್ನ ಡಿಸಿಎಂ ಅಶ್ವಥ್ ನಾರಾಯಣ ಅವರ ಬಳಿ ಕೇಳಲಿ, ಜಿಲ್ಲೆಯಲ್ಲಿ ಯಾರ ಅಧಿಕಾರ ನಡೆಯುತ್ತಿದೆ ಎಂದು ಕೇಳಿಕೊಳ್ಳಲಿ, ಸದ್ಯಕ್ಕೆ ನಾವು ಎಲ್ಲರಿಂದಲೂ ದೂರ ಇದ್ದೇವೆ ಎಂದರು.