ಆನೆಗಳ ಹಾವಳಿ; ಕೃಷಿ ಪರಿಕರಗಳೂ ನಾಶ

ರಾಮನಗರ: ಚನ್ನಪಟ್ಟಣ ತಾಲ್ಲೂಕಿನಾದ್ಯಂತ ಇತ್ತೀಚೆಗೆ ಕಾಡಾನೆಗಳು ರೈತರ ತಾಕುಗಳಿಗೆ ಲಗ್ಗೆ ಇಟ್ಟು ಬೆಳೆದಿರುವ ಭೂಮಿಗೆ ಲಗ್ಗೆ ಇಡುತ್ತಿದ್ದು, ಫಸಲನ್ನು ತಿಂದಿದ್ದಲ್ಲದೆ, ತುಳಿದು ಹಾಳು ಮಾಡುತ್ತಿವೆ. ಕೃಷಿ ಪರಿಕರಗಳನ್ನು ಮನಸೋ ಇಚ್ಛೆ ಮುರಿದು, ತುಳಿದು ನಾಶ ಮಾಡುತ್ತಿವೆ. ಅಲ್ಲದೇ ರೈತರು ನಿತ್ಯ ಜೀವಭಯದಲ್ಲಿ ಕಾಲ ಕಳೆಯುವಂತಾಗಿದೆ.
ತಾಲ್ಲೂಕಿನ ತೆಂಗಿನಕಲ್ಲು ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುವ ಹೊಸದೊಡ್ಡಿ, ನಂಜಾಪುರ, ಅರಳಾಳುಸಂದ್ರ, ಮೆಣಸಿಗನಹಳ್ಳಿ, ವಿಠಲೇನಹಳ್ಳಿ, ಬಿ ವಿ ಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಜಮೀನುಗಳಿಗೆ ನುಗ್ಗುವ ಆನೆಗಳು, ತಮ್ಮ ಮನಸೋ ಇಚ್ಚೆ ಮುರಿದು ತಿನ್ನುವುದಲ್ಲದೆ, ತುಳಿದು ನಾಶಪಡಿಸಿವೆ. ತಡರಾತ್ರಿ ಅರಳಾಳುಸಂದ್ರ ಗ್ರಾಮದ ವ್ಯಾಪ್ತಿಯಲ್ಲಿನ ಜಮೀನಿಗಳಿಗೆ ನುಗ್ಗಿರುವ ಆರು ಆನೆಗಳು, ಹಿರಿಯ ರೈತರಾದ ಸಿ ಪುಟ್ಟಸ್ವಾಮಿ, ದೇವರಾಜು, ನಾಗರಾಜು, ಗಿರೀಶ್, ಹುಚ್ಚಪ್ಪ, ಅಪ್ಪಾಜಿ, ಸದಾಶಿವ ಸೇರಿದಂತೆ ಹಲವು ರೈತರ ಹತ್ತಾರು ಎಕರೆಯಲ್ಲಿ ಕಷ್ಟಪಟ್ಟು ಬೆಳೆದ ಸೀಬೆ, ಮಾವು, ತೆಂಗು, ಶುಂಠಿ, ರಾಗಿ ಮತ್ತು ಸೀಮೆ ಹುಲ್ಲನ್ನು ತಿಂದು ತೇಗಿವೆ. ನೀರಿಗಾಗಿ ಜೋಡಿಸಿದ ಹನಿ ನೀರಾವರಿ ಪೈಪುಗಳನ್ನು ಕಿತ್ತೆಸೆದಿವೆ.
ಜಿಲ್ಲಾ ಉಪ ಅರಣ್ಯ ಅಧಿಕಾರಿ ಮಧು ಭೇಟಿ ನೀಡಿ, ವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚಿಸಿದರೂ ಸಹ ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದಿರುವುದರಿಂದ ತಡರಾತ್ರಿಯೂ ಸಹ ಆನೆಗಳು ದಿನಂಪ್ರತಿ ಲಗ್ಗೆ ಇಡುತ್ತಿವೆ.
ತಾಲ್ಲೂಕು ಮತ್ತು ಜಿಲ್ಲಾ ಅರಣ್ಯಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ನೀಡಿ, ಧರಣಿ ಮಾಡಿದ್ದೇವೆ. ತಾಲ್ಲೂಕು ಮತ್ತು ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಿದ್ದೇವೆ. ಆ ಸಮಯದಲ್ಲಿ ಭರವಸೆ ನೀಡಿ ಸಾಗಹಾಕುತ್ತಾರೆ. ಪಟಾಕಿ ಸಿಡಿಸಿ ಒಂದಷ್ಟು ದೂರ ಅಟ್ಟುತ್ತಾರೆಯೇ ವಿನಃ ಶಾಶ್ವತವಾಗಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅರಣ್ಯದ ಸುತ್ತಲೂ ಕಂದಕ ತೋಡುತ್ತಿಲ್ಲ. ಸೋಲಾರ್ ತಂತಿ ಬೇಲಿ ಅಳವಡಿಸುತ್ತಿಲ್ಲ. ಶಾಶ್ವತವಾಗಿ ಬೃಹದಾರಣ್ಯಗಳಿಗೆ ಆನೆಗಳನ್ನು ಓಡಿಸುತ್ತಿಲ್ಲ. ಇದು ಹೀಗೆ ಮುಂದುವರೆದರೆ ಅರಣ್ಯ ಇಲಾಖೆ ಮತ್ತು ತಾಲ್ಲೂಕು, ಜಿಲ್ಲಾಡಳಿತ ಕಛೇರಿಗಳ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ್ದ ಸಾತನೂರು ವಲಯ ಅರಣ್ಯಾಧಿಕಾರಿ ದಿನೇಶ್ ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ, ಈಗಾಗಲೇ ಕಂದಕಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಸೋಲಾರ್ ತಂತಿಬೇಲಿಯನ್ಗು ಇದೇ ತಿಂಗಳ 15 ರಿಂದ ಅಳವಡಿಸಲಾಗುತ್ತದೆ. ಶಾಶ್ವತವಾಗಿ ಆನೆಗಳನ್ನು ಬೃಹದಾರಣ್ಯಕ್ಕೆ ಓಡಿಸಲು ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ನಾಶವಾಗಿರುವ, ಫಸಲು ಮತ್ತು ಕೃಷಿ ಪರಿಸರ ಗಳಿಗೆ ಪರಿಹಾರ ನೀಡುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಸದ್ಯ ಈಗ ಆನೆಗಳು ನರಿಕಲ್ಲು ಅರಣ್ಯ ವ್ಯಾಪ್ತಿಯ ಬಿ.ವಿ.ಹಳ್ಳಿ ಸರರಹದ್ದಿನಲ್ಲಿ 6 ಆನೆಗಳು ಬೀಡು ಬಿಟ್ಟಿವೆ ಎಂದು ಅರಣ್ಯಧಿಕಾರಿ ಮಲ್ಲೇಶ್ ಮಾಹಿತಿ ನೀಡಿದ್ದಾರೆ.
—————
“ಆನೆಗಳು ರೈತರ ಜಮೀನುಗಳಿಗೆ ಬಾರದಂತೆ ತಡೆ ಹಾಕಿ ಈ ಪುಂಡಾನೆಗಳನ್ನು ಬೇರೆಡೆಗೆ ಸಾಗಿಸಿ, ಹಲವಾರು ವರ್ಷಗಳಿಂದಲೂ ಸುಮಾರು ೧೫ ಕ್ಕೂ ಹೆಚ್ಚು ಆನೆಗಳ ಹಳೆಯ ಜಾಡು ಹಿಡಿದು ಪದೇ ರೈತರ ಬೆಳೆ ನಾಶ ಮಾಡುತ್ತಿವೆ. ಇಲ್ಲವಾದಲ್ಲಿ ನಮಗೆ ಹಿಡಿದು ಕೊಡಿ ಕೊಪ್ಪಲು ಕಟ್ಟಿ ಸಾಕುತ್ತೇವೆ.”
-ಸಿ. ಪುಟ್ಟಸ್ವಾಮಿ, ರೈತ ಮುಖಂಡ