ಜಿಲ್ಲಾ ಸುದ್ದಿ

ಕಾಫಿನಾಡು ಈಗ ಕಾಡಾನೆಗಳ ಬೀಡು; ವೈಜ್ಞಾನಿಕ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲ

ವರದಿ: ಕಿರುಗುಂದ ರಫೀಕ್

ಚಿಕ್ಕಮಗಳೂರು: ಕಾಫಿನಾಡಿನ ಬಹುತೇಕ ಭಾಗದಲ್ಲಿ ಕಾಡಾನೆಗಳು ನಿರಂತರವಾಗಿ ಲಗ್ಗೆಯಿಡುತ್ತಿದ್ದು, ಜನಸಾಮಾನ್ಯರು ಅದರಲ್ಲೂ ರೈತರು ತಮ್ಮ ಗ್ರಾಮಗಳಲ್ಲಿ ಸದಾ ಆತಂಕದಲ್ಲೇ ಬದುಕು ಸಾಗಿಸುವಂತಾಗಿದೆ.

ಜಿಲ್ಲೆಯ ಸಾರಗೋಡು ಅರಣ್ಯ ವ್ಯಾಪ್ತಿಯಿಂದ ಹಾಗೂ ಪಕ್ಕದ ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು ತಾಲೂಕಿನ ಮೂಲಕ ಅರಣ್ಯ ಭಾಗದಿಂದ ಹೊರಬರುವ ಕಾಡಾನೆಗಳು ನಿರಂತರವಾಗಿ ದಾಂಗುಡಿಯಿಡುತ್ತಿದ್ದು ಮಲೆನಾಡಿನ ಬಹುತೇಕ ರೈತರು ಹೈರಾಣಾಗಿದ್ದಾರೆ.
ಕಾಡಾನೆಗಳು ಓಡಾಡುವಾಗ ಎದುರಿಗೆ ಸಿಕ್ಕ ಎಷ್ಟೋ ಮಂದಿ ರೈತರು ಪ್ರಾಣ ಕಳೆದುಕೊಂಡಿದ್ದಾರೆ. ದ್ವಿಚಕ್ರ ವಾಹನದಲ್ಲಿ ಸಂಚರಿಸುವವರನ್ನೂ ಬಿಟ್ಟಿಲ್ಲ. ಇವುಗಳ ದಾಳಿಗೆ ತೀವ್ರ ಗಾಯಾಳುಗಳಾಗಿ ಜೀವನ್ಮರಣ ಹೋರಾಟ ನಡೆಸಿದ್ದಾರೆ. ರೈತರ ಕಾಫಿಗಿಡಗಳು, ಅಡಕೆ-ಬಾಳೆ ತೋಟ, ಭತ್ತದ ಗದ್ದೆಗಳು ಸಂಪೂರ್ಣ ನಜ್ಜುಗುಜ್ಜಾಗುವಂತೆ ರಭಸದಲ್ಲಿ ಇವುಗಳು ಓಡಾಡುತ್ತವೆ. ಕಾಡಾನೆಗಳಷ್ಟೇ ಅಲ್ಲದೆ ಕಾಡುಕೋಣ (ಕಾಟಿ), ಕಾಡೆಮ್ಮೆ ಮುಂತಾದ ಪ್ರಾಣಿಗಳು ಹಲವು ಭಾಗದಲ್ಲಿ ರೈತರ ಬೆಳೆಗಳನ್ನು ನಾಶಪಡಿಸುತ್ತಿವೆ.

ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲ
ಅರಣ್ಯದಿಂದ ಬಂದು ಗ್ರಾಮಗಳಲ್ಲಿ ದಾಂಧಲೆ ನಡೆಸುವ ಕಾಡಾನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆಯಾಗಲಿ, ಸರ್ಕಾರವಾಗಲೀ ಸಮರ್ಪಕವಾದ ಕ್ರಮ ಕೈಗೊಂಡಿಲ್ಲ. ನಾಮಕಾವಸ್ತೆಗೆ ಮಾತ್ರ ಕೆಲವೆಡೆ ಅರಣ್ಯದ ಅಂಚಿನಲ್ಲಿ ಟ್ರಂಚಿಂಗ್, ಐಬೆಕ್ಸ್ ತಂತಿಗಳನ್ನು ಅಳವಡಿಸಲಾಗಿದೆ. ಇದು ತಾತ್ಕಾಲಿಕ ಕ್ರಮವಷ್ಟೇ. ಹವಾಮಾನ ವೈಪರೀತ್ಯಕ್ಕೆ ಜೋರಾದ ಗಾಳಿ, ಮಳೆ, ಭೂಕುಸಿತ ಉಂಟಾದಾಗ ಇವುಗಳ ನಿರ್ವಹಣೆಯೂ ಕಷ್ಟಕರವಾಗುತ್ತದೆ. ಹೀಗಾಗಿ ಇನ್ನಷ್ಟು ವೈಜ್ಞಾನಿಕವಾದ ಕ್ರಮ ಕೈಗೊಳ್ಳಬೇಕಾಗಿದೆ. ಅರಣ್ಯದಂಚಿನ ಯಾವ ದಿಕ್ಕಿನಿಂದಲೂ ಕಾಡಾನೆಗಳು, ಕಾಡುಕೋಣ ಇತ್ಯಾದಿ ಪ್ರಾಣಿಗಳು ಹೊರಬಾರದಂತೆ ನಿಯಂತ್ರಣ ಕ್ರಮ ಕೈಗೊಂಡಲ್ಲಿ ಮಾತ್ರ ಮಲೆನಾಡಿನ ರೈತರು ನೆಮ್ಮದಿಯಿಂದ ಜೀವಿಸಬಹುದು.

ಕಾಡಿನಿಂದ ನಾಡಿಗೇಕೆ ಆನೆಗಳ ನಡಿಗೆ?
ಆನೆಗಳು ನಿರಂತರವಾಗಿ ಲಗ್ಗೆಯಿಡಲು ಕಾರಣವೇನೆಂದು ಹುಡುಕಿದರೆ ಮತ್ತೇನೂ ಅಲ್ಲ. ಕಾಡಿನೊಳಗೆ ಅವುಗಳಿಗೆ ತಿನ್ನಲು ಸಸ್ಯಸಂಪತ್ತಿನ ಕೊರತೆಯಿದೆ. ಫಾರೆಸ್ಟ್ ಎಂದು ಕರೆಯಲ್ಪಡುವ ಅರಣ್ಯ ಭಾಗದಲ್ಲಿ ಬಹುತೇಕ ಅಕೇಶಿಯಾ, ನೀಲಗಿರಿ ತೋಪುಗಳೇ ಕಾಣಿಸುತ್ತವೆ ಹೊರತು, ಕಾಡುಜಾತಿಯ ಮರಗಳ ಸಂಖ್ಯೆ ವಿರಳವಾಗಿವೆ. ವಿವಿಧ ಕಾಡು ಜಾತಿಯ ಮರಗಳ ಸೊಪ್ಪನ್ನು ಆನೆಗಳು ತಿನ್ನುತ್ತವೆ. ಸೊಪ್ಪುಗಳು ಸಿಗದಿದ್ದಾಗ ಅರಣ್ಯದಿಂದ ಹೊರಬಂದು ತೋಟದಲ್ಲಿ ಬೆಳೆದ ಮರಗಳ ಸೊಪ್ಪು ಹುಡುಕುವ ಭರದಲ್ಲಿ ಬೆಳೆದ, ಬಾಳೆ-ಅಡಕೆ, ಕಾಫಿ ಗಿಡಗಳನ್ನು ಕಾಲಡಿಗೆ ಹಾಕಿ ರೈತರ ಬದುಕನ್ನೇ ಹೊಸಕಿ ಹಾಕುತ್ತಿವೆ.
—————-
“ಒಂದೆಡೆ ಕೋವಿಡ್ ಸಮಸ್ಯೆಯಾದರೆ, ಮತ್ತೊಂದೆಡೆ ಮಲೆನಾಡಿನಲ್ಲಿ ಕಾಡುಪ್ರಾಣಿಗಳ ದಾಂಧಲೆಯಿಂದ ರೈತರ ಬದುಕು ದುಸ್ತರವಾಗಿದೆ. ಕಾಡಾನೆಗಳ ದಾಳಿಗೆ ಸಕಲೇಶಪುರದಲ್ಲಿ ಒಂದೇ ತಿಂಗಳಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಇತ್ತೀಚಿನ ದಿನಗಳಲ್ಲಿ ರೈತರ ಸಮಸ್ಯೆಗೆ ಸರ್ಕಾರ ಯಾವುದೇ ರೀತಿಯಲ್ಲೂ ಸ್ಪಂದಿಸುತ್ತಿಲ್ಲ. ಕೋವಿಡ್ ಇದ್ದರೂ ಕೂಡ ಹಳ್ಳಿಗಳಲ್ಲಿ ರೈತರು ಎದೆಗುಂದದೆ ವ್ಯವಸಾಯ ಮುಂದುವರಿಸಿದ್ದಾರೆ. ಆದರೆ ಕೇಂದ್ರ ಸರ್ಕಾರವಾಗಲೀ, ರಾಜ್ಯ ಸರ್ಕಾರವಾಗಲೀ ರೈತರಿಗೆ ಹೆಚ್ಚಿನ ನೆರವು ನೀಡದೆ ವಂಚಿಸಿವೆ”
-ಬಾಲು, ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ
—————-
“ಕಾಡಾನೆಗಳನ್ನು ಹಿಮ್ಮೆಟ್ಟಿಸುವ ತಂಡ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಭಾರತಿಬೈಲು, ಬಾನಹಳ್ಳಿ ಭಾಗದಲ್ಲಿ 10ಕಿ.ಮೀ ಸೋಲಾರ್ ಕೆಂಟಿಕಲ್ ತಂತಿ ಅಳವಡಿಸಿದ್ದರಿಂದ ಅಲ್ಲಿ ಪ್ರಕರಣಗಳು ತುಂಬಾ ಕಡಿಮೆಯಾಗಿವೆ. ಆಗಾಗ ನಿರ್ವಹಣೆಯೂ ನಡೆಯುತ್ತಿರುತ್ತವೆ. ಹೆಚ್ಚುವರಿಯಾಗಿ ಅಗತ್ಯವಿರುವಲ್ಲಿ ಭಾಗಕ್ಕೆ ಇಂತಹ ವ್ಯವಸ್ಥೆಯಾಗಬೇಕು. ಇದಕ್ಕೆ ಅನುದಾನದ ಅವಶ್ಯಕತೆಗಾಗಿ ಕೋರಿಕೆ ಸಲ್ಲಿಸಲಾಗಿದೆ. ಕಳೆದ ವರ್ಷ 1.18 ಕೋಟಿ ಪರಿಹಾರ ನೀಡಲಾಗಿದೆ. ಕಾಡಾನೆಗಳಿಂದ ಬೆಳೆ ನಾಶ ಹೊಂದಿರುವ ರೈತರಿಗೆ ಸರ್ಕಾರಿ ಆದೇಶದ ಪ್ರಕಾರ ಪರಿಹಾರ ನೀಡಲಾಗುತ್ತಿದೆ. ರೈತರು ಆನ್ಲೈನ್ನಲ್ಲಿ ಅರ್ಜಿ ಹಾಕಬೇಕು, ಕರ್ನಾಟಕ ಅರಣ್ಯ ಇಲಾಖೆಯ e-parihara ಮೂಲಕ ಅರ್ಜಿಯನ್ನು ಸಲ್ಲಿಸಬಹುದು”
-ಜಗನ್ನಾಥ್, ಉಪ ಅರಣ್ಯ ಸರಂರಕ್ಷಣಾಧಿಕಾರಿ

Spread the love

Related Articles

Leave a Reply

Your email address will not be published. Required fields are marked *

Back to top button