ಚನ್ನಪಟ್ಟಣದ ಬಿ.ವಿ. ಹಳ್ಳಿ ಬಳಿ 23 ಆನೆಗಳು ಪ್ರತ್ಯಕ್ಷ

ರಾಮನಗರ: ಕಳೆದ ಮೂರ್ನಾಲ್ಕು ತಿಂಗಳಿಂದ ರಾಮನಗರ ಮತ್ತು ಚನ್ನಪಟ್ಟಣದ ವಿವಿಧ ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ 23 ಆನೆಗಳು ಒಂದೇ ಕಡೆ ಪ್ರತ್ಯಕ್ಷವಾಗಿದ್ದರೇ ಮತ್ತೊಂದೆಡೆ ಒಂದು ಆನೆ ಒಂಟಿಯಾಗಿ ಓಡಾಡುತ್ತಿದೆ.
ತೆಂಗಿನಕಲ್ಲು ಅರಣ್ಯ ವ್ಯಾಪ್ತಿಯ ಬಿ.ವಿ.ಹಳ್ಳಿ ಕೆರೆ ಬಳಿ 23 ಆನೆಗಳು ಬೀಡುಬಿಟ್ಟಿದ್ದರೇ, ರಾಮನಗರದ ಚಿಕ್ಕಮಣ್ಣುಗುಡ್ಡೆ ಅರಣ್ಯದಲ್ಲಿ ಒಂಟಿಯಾಗಿ ಒಂದು ಆನೆ ಬೀಡು ಬಿಟ್ಟಿದೆ.
ಬಿ.ವಿ.ಹಳ್ಳಿ ಕೆರೆಯಲ್ಲಿ ಬಿಡುಬಿಟ್ಟಿರುವ ಆನೆಗಳು ಹಳ್ಳಿಗಳ ಕಡೆಗೆ ನುಗ್ಗದಂತೆ ಅರಣ್ಯ ಇಲಾಖೆ ಸಿಬ್ಬಂದಿ ಪಹರೆ ಕಾಯುತ್ತಿದ್ದಾರೆ.
ರೈತರು ಆನೆಗಳ ಉಪಟಳದಿಂದ ಬೇಸತ್ತು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಕಾವೇರಿ ವನ್ಯಜೀವಿ ಧಾಮ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಆನೆಗಳನ್ನು ಅಟ್ಟಲು (ಓಡಿಸಲು) ತೀರ್ಮಾನ ಕೈಗೊಂಡು ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ.
ಮನವಿ: ಕಳೆದ ಮೂರ್ನಾಲ್ಕು ತಿಂಗಳಿಂದ ಕಾಡಾನೆಗಳು ರೈತರ ಜಮೀನುಗಳಿಗೆ ನುಗ್ಗಿ ಬೆಳೆ, ಜಾನುವಾರು ಆಸ್ತಿ ಮುಂತಾದವುಗಳ ಮೇಲೆ ದಾಳಿ ಮಾಡಿ ಹಾನಿ ಮಾಡಿವೆ. ಇದರಿಂದ ಈ ಆನೆಗಳನ್ನು ಕಾವೇರಿ ವನ್ಯಜೀವಿ ಧಾಮ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಅಟ್ಟಲಾಗುತ್ತಿದೆ ಎಂದು ರಾಮನಗರ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜು ತಿಳಿಸಿದ್ದಾರೆ.
ಅದ್ದರಿಂದ ರಾಮನಗರದ ಕೈಲಾಂಚ, ಚನ್ನಪಟ್ಟಣದ ವಿರುಪಾಕ್ಷಿಪುರ, ಕನಕಪುರದ ಸಾತನೂರು ಹೋಬಳಿಯ ಗ್ರಾಮಗಳ ಜನತೆ ಜೂನ್10ರಿಂದ 15ರ ವರೆಗೆ ಹಗಲು ಮತ್ತು ರಾತ್ರಿ ವೇಳೆ ಸುರಕ್ಷಿತ ಸ್ಥಳದಲ್ಲಿ ಇರುವಂತೆ ಮನವಿ ಮಾಡಿದ್ದಾರೆ
ಅನುಭವದ ಕೊರತೆ: ರಾಮನಗರದ ಅರಣ್ಯ ಇಲಾಖೆಯ ಅರಣ್ಯ ವಲಯಗಳಲ್ಲಿ ಹೊಸದಾಗಿ ಇಲಾಖೆಗೆ ಸೇರಿದವರೆ ಹೆಚ್ಚಿದ್ದಾರೆ. ಅದ್ದರಿಂದ ಅವರಿಗೆ ಅನುಭದ ಕೊರತೆ ಇದ್ದು, ಆನೆಗಳನ್ನು ಸಕಾಲಕ್ಕೆ ಅರಣ್ಯಕ್ಕೆ ಓಡಿಸಲು ಅವರಿಂದ ಸಾಧ್ಯವಾಗುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.