ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ; ಆಸ್ಟ್ರೊ ಮೋಹನ್ ಚಿತ್ರಕ್ಕೆ ಸ್ವರ್ಣ ಪದಕ

ಉಡುಪಿ: ಫೋಟೋಗ್ರಫಿ ಸೊಸೈಟಿ ಆಫ್ ಇಂಡಿಯಾ ಆಯೋಜಿಸಿದ್ದ 19ನೇ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಉದಯವಾಣಿಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೊ ಮೋಹನ್ ಚಿತ್ರಕ್ಕೆ ಫೋಟೋಗ್ರಫಿ ಸೊಸೈಟಿ ಅಮೆರಿಕದ ಸ್ವರ್ಣ ಪ್ರಶಸ್ತಿ ಪ್ರಾಪ್ತವಾಗಿದೆ.
ಫೋಟೋಗ್ರಫಿಯಿಂದಲೇ ರಾಜ್ಯಾದ್ಯಂತ ಹೆಸರಾಗಿರುವ ಇವರು ಭಿನ್ನ-ವಿಭಿನ್ನ ಶೈಲಿಯ ಕಥಾನಕಗಳನ್ನು ಹೇಳುವಂತಹ ಫೋಟೋಗ್ರಫಿ ಸೆರೆಹಿಡಿದು ಆ ಮೂಲಕ ಜನಮನ್ನಣೆ ಗಳಿಸಿದ್ದಾರೆ. ನಿರಂತರವಾಗಿ ಒಂದಲ್ಲ ಒಂದು ರೀತಿಯಲ್ಲಿ ಛಾಯಾಚಿತ್ರಗಳಿಂದ ಪ್ರಚಲಿತಕ್ಕೆ ಬರುವ ಇವರು ಫೋಟೋಗ್ರಫಿಯನ್ನು ಒಂದು ಫ್ಯಾಷನ್ ಆಗಿ ತೆಗೆದುಕೊಂಡಿದ್ದಾರೆ.
ತಮ್ಮ ಕೈಯಲ್ಲಿರುವ ಕ್ಯಾಮೆರಾಕ್ಕೆ ವಿಶೇಷ ರೀತಿಯ ಗೌರವ ಸಲ್ಲಿಸುವ ಹಿರಿಯ ಫೋಟೋಗ್ರಾಫರ್ ಆದ ಇವರಿಗೆ ಫೋಟೋಗ್ರಫಿ ಎಂದರೆ ಪಂಚಪ್ರಾಣ. ಫೋಟೋಗ್ರಫಿಯಲ್ಲಿ ದಾಖಲೆ ಸೃಷ್ಟಿ ಮಾಡಬೇಕು ಎನ್ನುವ ಕನಸು ಹೊತ್ತಿದ್ದಾರೆ. ಇದೀಗ ಇವರ ಶ್ರವಣಬೆಳಗೊಳದ ಗೋಮಟೇಶ್ವರ ಚಿತ್ರಕ್ಕೆ ಅತ್ಯುತ್ತಮ ವಾಸ್ತುಶಿಲ್ಪ ವಿಭಾಗದಲ್ಲಿ ಈ ಪ್ರಶಸ್ತಿ ಬಂದಿದೆ.
ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ವಿಶ್ವದ 47 ದೇಶಗಳಿಂದ 5688 ಛಾಯಾಚಿತ್ರಗಳು ಆಗಮಿಸಿದ್ದವು. 26 ವರ್ಷಗಳ ಸುಧೀರ್ಘ ಅವಧಿಯಲ್ಲಿ ಆಸ್ಟ್ರೊ ಮೋಹನ್ ಸುಮಾರು 471 ರಾಷ್ಟ್ರೀಯ , ಅಂತಾರಾಷ್ಟ್ರೀಯ ಪ್ರಶಸ್ತಿಗಳು ಪಡೆದುಕೊಂಡಿದ್ದಾರೆ ಆದರೂ ಇನ್ನಷ್ಟು ದಾಖಲೆಗಳನ್ನು ಸೃಷ್ಟಿ ಮಾಡಬೇಕು ಎನ್ನುವ ಈ ಫೋಟೋಗ್ರಾಫರ್ ತವಕ ಇನ್ನೂ ಕೂಡ ಇಂಗಿಲ್ಲ.