ಪೌರ ಕಾರ್ಮಿಕರಿಗೆ ನೆರವಾದ ಕುಮಟಾ ಲಯನ್ಸ್ ಕ್ಲಬ್

ಕಾರವಾರ: ಲಯನ್ಸ್ ಕ್ಲಬ್ ಕುಮಟಾ ಘಟಕವು ಪುರಸಭೆಯ ಗುತ್ತಿಗೆ ಆಧಾರಿತ ಪೌರ ಕಾರ್ಮಿಕರಿಗೆ ಅಗತ್ಯ ದಿನಸಿ ಕಿಟ್ ಹಾಗೂ ಕೊರೋನಾಕ್ಕೆ ಸಂಬಂಧಿಸಿದ ಆಯುರ್ವೇದಿಕ್ ಔಷಧಿಗಳನ್ನು ವಿತರಿಸುವ ಮೂಲಕ ಅಂತಾರಾಷ್ಟ್ರೀಯ ಲಾಯನ್ಸ್ ಕ್ಲಬ್ನ 104 ನೆಯ ವರ್ಷಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿತು.
ಲಯನ್ಸ್ ಕ್ಲಬ್ ನ 317 ಬಿ. ಜಿಲ್ಲಾ ಪ್ರಾಂತಪಾಲ ಡಾ.ಗಿರೀಶ ಕುಚಿನಾಡ ಫಲಾನುಭವಿಗಳಿಗೆ ಅಗತ್ಯ ಕಿಟ್ ವಿತರಿಸಿದರು. ನಂತರ ಅವರು ಮಾತನಾಡಿ, ಲಯನ್ಸ್ ಸಂಸ್ಥೆಯ ಸೇವಾ ಚಟುವಟಿಕೆಗಳ ಕುರಿತು ವಿವರಿಸಿದರು.ಸಂಕಷ್ಟದ ಸಂದರ್ಭದಲ್ಲಿ ಅಗತ್ಯವಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ,ತಮ್ಮಿಂದಾದ ಸೇವೆಯನ್ನು ತಲುಪಿಸುವ ಲಯನ್ಸ್ ಕ್ಲಬ್ನ ಕುಮಟಾ ಘಟಕದ ಕಾರ್ಯವನ್ನು ಶ್ಲಾಘಿಸಿದರು.
ಲಯನ್ಸ್ ಕ್ಲಬ್ ಕುಮಟಾ ಘಟಕದ ಅಧ್ಯಕ್ಷೆ ಲಾಯನ್ ವಿನಯಾ ಹೆಗಡೆ ಮಾತನಾಡಿ, ಲಯನ್ಸ್ ವತಿಯಿಂದ ಸುಮಾರು 20 ಸಾವಿರಕ್ಕೂ ಅಧಿಕ ರೂ.ಮೌಲ್ಯದ ಅಗತ್ಯ ದಿನಸಿ ಹಾಗೂ ಔಷಧಿಯ ಕಿಟ್ನ್ನು ಎಲ್ಲ ಸದಸ್ಯರ ಸಹಕಾರದಿಂದ ಅರ್ಹರಿಗೆ ವಿತರಿಸಲಾಗಿದೆ.ಕೊರೋನಾ ಸೇನಾನಿಗಳ ಕಾರ್ಯಗಳನ್ನು ಗೌರವಿಸುವುದರ ಜೊತೆಗೆ ಅವರಿಗೆ ನೈತಿಕ ಬೆಂಬಲ ನೀಡುವುದೇ ನಮ್ಮ ಸಂಸ್ಥೆಯ ಉದ್ದೇಶವಾಗಿದೆ ಎಂದರು.
ಲಯನ್ ಡಾ.ಸುರೇಶ ಹೆಗಡೆ ಅವರು ಮಾತನಾಡಿ, ಕೊರೋನಾ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆ ಹಾಗೂ ಔಷಧಿಗಳ ಬಳಕೆಯ ಕುರಿತು ಮಾರ್ಗದರ್ಶನ ನೀಡಿದರು.ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷೆ ಮೋಹಿನಿ ಗೌಡ,ಉಪಾಧ್ಯಕ್ಷ ರಾಜೇಶ ಪೈ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ಹರ್ಮಲ್ಕರ,ಲಯನ್ಸ್ ಕಾರ್ಯದರ್ಶಿ ಡಾ. ಎಸ್.ಎಸ್.ಹೆಗಡೆ ಪುರಸಭಾ ಮುಖ್ಯಾಧಿಕಾರಿ ಸುರೇಶ ಎಮ್.ಕೆ. ಅವರು ಉಪಸ್ಥಿತರಿದ್ದರು.