ಧಾರವಾಡ ಕೆಐಎಡಿಬಿ ಕಚೇರಿಯಲ್ಲಿ ಬೀಡುಬಿಟ್ಟ ಎಸಿಬಿ ಅಧಿಕಾರಿಗಳು; ಅವ್ಯವಹಾರ ಕುರಿತು ವಿಚಾರಣೆ

ಧಾರವಾಡ: ವಿಶೇಷ ಭೂಸ್ವಾಧಿನಾಧಿಕಾರಿಗಳ ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳು ಕಳೆದ ತಡ ಸಂಜೆಯಿಂದ ಬೀಡು ಬಿಟ್ಟಿದ್ದಾರೆ. ಇದಕ್ಕೆ ಮೂಲ ಕಾರಣ ಕಚೇರಿಯಲ್ಲಿ ದೊಡ್ಡಮಟ್ಟದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ವಿಶೇಷ ಭೂಸ್ವಾಧಿನಾಧಿಕಾರಿಗಳ ಕಚೇರಿಯಲ್ಲಿ ದೊಡ್ಡಮಟ್ಟದಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಎಸಿಬಿಗೆ ಎರಡು ಪ್ರತ್ಯೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಎಸಿಬಿ ಎಸ್ಪಿ ಎಸ್.ನ್ಯಾಮಗೌಡ ನೇತೃತ್ವದ ಅಧಿಕಾರಿಗಳ ತಂಡ ನಿನ್ನೆ ರಾತ್ರಿಯಿಂದ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದೆ ಭೂಸ್ವಾಧೀನಾಧಿಕಾರಿಗಳ ಕಚೇರಿಯಿಂದ ಭೂಸ್ವಾಧೀನಕ್ಕೊಳಪಟ್ಟ ನಿಜವಾದ ಫಲಾನುಭವಿಗಳಿಗೆ ಪರಿಹಾರ ದೊರಕುತ್ತಿಲ್ಲ.
ಇನ್ನೂ ವ್ಯಾಜ್ಯ ನ್ಯಾಯಾಲಯದಲ್ಲಿರುವಾಗಲೇ ಫಲಾನುಭವಿಗಳಿಗೆ ಪರಿಹಾರ ಕೊಡಲಾಗುತ್ತಿದೆ. ಕಚೇರಿಯಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ವಾದಿರಾಜ ಮನ್ನಾರಿ ಹಾಗೂ ಶಿವಾಜಿ ಡೇಂಬ್ರೆ ಎಂಬುವವರು ಪ್ರತ್ಯೇಕವಾಗಿ ಎಸಿಬಿಗೆ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಎಸಿಬಿ ಅಧಿಕಾರಿಗಳು ಕಳೆದ ದಿನ( ಜೂನ್ 29 ) ರಿಂದ ವಿಚಾರಣೆ ನಡೆಸುತ್ತಿದ್ದಾರೆ. ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಮನೋಹರ ವಡ್ಡರ ಬುಧವಾರ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳು ವಿಚಾರಣೆ ಕೈಗೆತ್ತಿಕೊಂಡಿದ್ದು, ಯಾವುದೇ ಸಂದರ್ಭದಲ್ಲಿ ವಿಚಾರಣೆಗೆ ಕರೆದರೂ ಹಾಜರಾಗಬೇಕು ಎಂದು ಮನೋಹರ ಅವರಿಗೆ ಎಸಿಬಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಪ್ರಮುಖವಾಗಿ ಧಾರವಾಡ ತಾಲೂಕಿನ ಇಟಿಗಟ್ಟಿ ಹಾಗೂ ಗಾಮನಗಟ್ಟಿ ಗ್ರಾಮದಲ್ಲಿ ನಡೆದ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಅವ್ಯವಹಾರ ನಡೆದಿದೆ ಎಂದು ಎಸಿಬಿಗೆ ದೂರು ಬಂದಿವೆ. ಈ ಆಧಾರದ ಮೇಲೆ ಎಸಿಬಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.