ಹುಬ್ಬಳ್ಳಿ ಧಾರವಾಡದಲ್ಲಿ ಲಸಿಕೆ ಸಿಗದೆ ಸಾರ್ವಜನಿಕರ ಪರದಾಟ

ಧಾರವಾಡ: ಜಿಲ್ಲೆಯಲ್ಲಿ ಲಸಿಕೆ ವಿತರಣೆ ಗೊಂದಲ ಮುಂದುವರೆದಿದ್ದು, ಇಂದು ಕೂಡಾ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಹಾಗೂ ಧಾರವಾಡದ ಜಿಲ್ಲಾ ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ, ಲಸಿಕೆ ಸ್ಟಾಕ್ ಇಲ್ಲದೇ ಜನರು ಸರದಿ ಸಾಲಿನಲ್ಲಿ ನಿಂತು ಲಸಿಕೆ ದೊರೆಯದೇ ವಾಪಸ್ ಮರಳುವಂತಾಗಿದೆ.
ಮುಂಜಾನೆಯಿಂದಲೇ ಲಸಿಕೆ ಪಡೆಯಲು ಸಾರ್ವಜನಿಕರ ಆಸ್ಪತ್ರೆಗಳ ಹಾಗೂ ಲಸಿಕಾ ಕೇಂದ್ರಗಳ ಮುಂದೆ ಸರತಿಸಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದು, ಆದರೆ 9.30ರೇ ಮತರ ಆಸ್ಪತ್ರೆಯ ಸಿಬ್ಬಂದಿ, ಕೇಂದ್ರದ ಸಿಬ್ಬಂದಿ ಲಸಿಕೆಯ ಕೊರತೆಯ ಮಾಹಿತಿ ನೀಡುತ್ತಿದ್ದು, ಇದರಿಂದಾಗಿ ಸಿಬ್ಬಂದಿ-ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಈಗಾಗಲೇ ಕೊರೊನಾ ಎರಡನೇ ಅಲೆಗೆ ಜನಜೀವನ ತತ್ತರಿಸಿದ್ದು, ಮೂರನೇ ಅಲೆಯ ಭೀಕರ ಪರಿಸ್ಥಿತಿಯಿಂದ ಬಚಾವಾಗಲು ಲಸಿಕೆ ಪಡೆಯುವುದೊಂದೇ ಪರಿಹಾರ ಎಂದು ವೈದ್ಯಕೀಯ ತಜ್ಞರು ಸಲಹೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜನರು ಲಸಿಕೆ ಪಡೆಯಲು ಮುಂದಾಗುತ್ತಿದ್ದು, ಪರಿಣಾಮ ಜಿಲ್ಲೆಯಲ್ಲಿ ಕೊರೊನಾ ಲಸಿಕೆಗೆ ಬೇಡಿಕೆ ಹೆಚ್ಚಾಗಿದೆ, ಆದರೆ ಪೂರೈಕೆ ಇಳಿಮುಖ ಕಂಡಿದೆ. ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಕೇಲುವು ಕಡೆ ಸಿಕ್ಕರೆ ಇನ್ನೂ ಕೆಲವು ಕಡೆಗಳಲ್ಲಿ ಸಿಗುತ್ತಿಲ್ಲ. ಇನ್ನೂ ಕೆಲವು ಧಾರವಾಡ ಜಿಲ್ಲಾಸ್ಪತ್ರೆ ಸೇರಿದಂತೆ ಹಲವು ಕಡೆ ಮೊದಲ ಡೋಸ್ ಇಲ್ಲವೆಂದು ಹೇಳಿ ಕಳುಹಿಸಲಾಗುತ್ತಿದೆ. ಹಿರಿಯ ನಾಗರೀಕರು ಹಾಗೂ ಅನಾರೋಗ್ಯ ಪೀಡಿತರು ಲಸಿಕೆ ಪಡೆಯಲು ಆಸ್ಪತ್ರೆಗೆ ಬಂದು ವಾಪಾಸ್ಸಾಗುತ್ತಿದ್ದು. ಮೊದಲೇ ರಿಜಿಸ್ಟರ್ ಮಾಡಿಕೊಂಡು ಬಂದರೂ ಸಹ ಲಸಿಕೆ ಸಿಗುತ್ತಿಲ್ಲ ಎಂಬ ಆರೋಪಗಳನ್ನು ಸಾರ್ವಜನಿಕರು ಮಾಡುತ್ತಿದ್ದಾರೆ.