ಸಿಎಂ ಬೆಳಗಾವಿಗೆ ಬಂದರೂ ಹತ್ತಿರ ಸುಳಿಯದ ಜಾರಕಿಹೊಳಿ ಬ್ರದರ್ಸ್

ಬೆಳಗಾವಿ: ಕೋವಿಡ್ ನಿರ್ವಹಣೆ ಹಾಗೂ ಅಭಿವೃದ್ಧಿ ವಿಚಾರಗಳ ಸಂಬಂಧ ಪ್ರಗತಿ ಪರಿಶೀಲನಾ ಸಭೆ ನಡೆಸಲು ಬೆಳಗಾವಿಗೆ ಸಿಎಂ ಯಡಿಯೂರಪ್ಪ ಇಂದು ಆಗಮಿಸಿದರು. ಆದರೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಿಎಂ ಭೇಟಿಗೆ ಬಂದಿಲ್ಲ. ಅಲ್ಲದೆ ಪ್ರಗತಿ ಪರಿಶೀಲನಾ ಸಭೆಗೂ ಗೈರಾಗಿ ಪರೋಕ್ಷವಾಗಿ ಸಿಎಂ ಯಡಿಯೂರಪ್ಪ ಅವರಿಗೆ ಶಾಕ್ ನೀಡಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಸಭೆಯಲ್ಲಿ ಭಾಗಿಯಾಗಿದ್ದಾರೆ. ಆದರೆ ಬಿಜೆಪಿಯಲ್ಲಿರುವ ರಮೇಶ್ ಹಾಗೂ ಬಾಲಚಂದ್ರ ಜಾರಕಿಹೊಳಿ ಸಭೆಗೆ ಗೈರಾಗಿದ್ದಾರೆ. ಉಳಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ನ ಬಹುತೇಕ ಶಾಸಕರು ಸಭೆಯಲ್ಲಿದ್ದಾರೆ. ಇನ್ನೇನು ಮತ್ತೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತು ಕೇಳಿಬರುತ್ತಿರುವ ಹಿನ್ನಲೆ ರಮೇಶ ಜಾರಕಿಹೊಳಿ ಮಂತ್ರಿಗಿರಿಗೆ ತಮ್ಮದೇ ಶೈಲಿಯಲ್ಲಿ ಲಾಬಿ ಶುರು ಮಾಡಿದ್ದಾರೆ
ಇನ್ನೊಂದು ರೀತಿಯಲ್ಲಿ ನೋಡುವುದಾದರೆ ಸಿಡಿ ಪ್ರಕರಣದ ನಂತರ ಜಾರಕಿಹೊಳಿ ಸಹೋದರರು ಸಿಎಂ ಯಡಿಯೂರಪ್ಪ ಜೊತೆಗೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಬೆಳಗಾವಿ ಲೋಕಸಭಾ ಉಪಚುನಾವಣೆ ಸಂದರ್ಭದಲ್ಲೂ ಜಾರಕಿಹೊಳಿ ಬ್ರದರ್ಸ್ ಸಿಎಂ ಭೇಟಿಯಾಗಿರಲಿಲ್ಲ. ಸಿಎಂ ಯಡಿಯೂರಪ್ಪ ಹಾಗೂ ಜಾರಕಿಹೊಳಿ ಸಹೋದರರ ಮುನಿಸು ಮುಂದುವರೆದಿದ್ದು, ಮರ್ಮ ಏನು ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.