ಉ.ಕ ಜಿಲ್ಲಾಡಳಿತದ ಮನಸೋ ಇಚ್ಛೆ ನಡೆ; ಜನತೆ ಹಿಡಿಶಾಪ

ಕಾರವಾರ : ಲಾಕ್ಡೌನ್ ಹೊತ್ತಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ರಾಜನ ದರ್ಬಾರ್ ಒಂದೆಡೆಯಾದರೆ, ಇನ್ನೊಂದೆಡೆ ಪೊಲೀಸರ್ ದರ್ಬಾರ್ ಮಿತಿ ಮೀರಿದೆ.
ರಾಜ್ಯದಲ್ಲಿ ಒಂದು ಹಂತದ ಲಾಕ್ ಡೌನ್ ಯಶಸ್ವಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಎರಡನೆ ಹಂತದ ಲಾಕ್ ಡೌನ್ ಘೋಷಣೆ ಮಾಡಿ ಇಂದಿಗೆ ಒಂದು ತಿಂಗಳು ಗತಿಸಿದೆ. ಅಗತ್ಯವೆನಿಸಿದಾಗ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆಯ ಅಧಿಕಾರವನ್ನು ಯಾವಾಗ ಸರ್ಕಾರ ಜಿಲ್ಲಾಡಳಿತಕ್ಕೆ ನೀಡಿತೋ ಅಂದಿನಿಂದ ಇಂದಿನವರೆಗೂ ಮನಸೋ ಇಚ್ಛೆ ಆಡಳಿತ ಜಿಲ್ಲೆಯಲ್ಲಿ ಜಾರಿಯಲ್ಲಿದೆ.
ಲಾಕ್ ಡೌನ್ ಅವಧಿಯಲ್ಲಿ ಸರ್ಕಾರ ದಿನನಿತ್ಯವೂ ಮುಂಜಾನೆ 6 ಘಂಟೆಯಿಂದ 10 ಘಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಟ್ಟಿತ್ತು.ಈ ಅವಧಿ ಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಅಷ್ಟಾಗಿ ಸಮಸ್ಯೆಗಳು ಕಂಡುಬರಲಿಲ್ಲ.
ಕಳೆದೊಂದು ವಾರದ ಹಿಂದೆ ವಾರಕ್ಕೆರಡು ದಿನ ಅಂದರೆ ಮಂಗಳವಾರ ಮತ್ತು ಶುಕ್ರವಾರ ಬೆಳಿಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸಮಯವನ್ನು ನಿಗದಿ ಮಾಡಿದ ಜಿಲ್ಲಾಡಳಿತ ಗ್ರಾಮೀಣ ಪ್ರದೇಶದ ಜನರ ಬದುಕನ್ನು ಗಣನೆಗೆ ತೆಗೆದುಕೊಳ್ಳದೇ ಯಡವಟ್ಟನ್ನು ಮಾಡಿಕೊಂಡಿತು. ಯಾವಾಗ ಅಗತ್ಯ ವಸ್ತುಗಳ ಖರೀದಿಗೆ ಗ್ರಾಮೀಣ ಪ್ರದೇಶದ ಜನತೆ ಮುಗಿಬಿದ್ದರೋ ಆಗ ಮತ್ತೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ವಾರಕ್ಕೆ ನಾಲ್ಕು ದಿನ ಅಂದರೆ ಸೋಮವಾರ, ಮಂಗಳವಾರ, ಬುಧವಾರ ಮತ್ತು ಗುರುವಾರ ದಿನಗಳಂದು ಬೆಳಿಗ್ಗೆ 8 ಘಂಟೆಯಿಂದ 12 ಘಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಟ್ಟು,ವಾರದ ಮೂರು ದಿನ ಅಂದರೆ ಶುಕ್ರವಾರ, ಶನಿವಾರ ಮತ್ತು ರವಿವಾರ ಸಂಪೂರ್ಣ ಲಾಕ್ ಡೌನ್ ವಿಧಿಸಿ ಆದೇಶ ಹೊರಡಿಸಿತು.
ಈ ಆದೇಶ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿದ್ದಂತೆ ಮತ್ತೆ ಸಾಯಂಕಾಲದ ಹೊತ್ತಿಗೆ ಸಭೆ ಸೇರಿದ ಜಿಲ್ಲಾಡಳಿತ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ವಿಧಿಸಿ ಆದೇಶ ಹೊರಡಿಸಿದೆ. ಈ ಮೂಲಕ ಜಿಲ್ಆಲಾಡಳಿತ ನಗೆಪಾಟಲಿಗೆ ಗುರಿಯಾಗಿದೆ.
ಜಿಲ್ಲಾಡಳಿತದ ಈ ಕ್ರಮದಿಂದ ವ್ಯಾಪಾರಸ್ಥರು ಕಾಳಸಂತೆಯಲ್ಲಿ ದಿನಸಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ತರಕಾರಿ, ಮೀನು, ದಿನಸಿ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಜಿಲ್ಲಾಡಳಿತದಈ ನಿರ್ಧಾರಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
