ಜಿಲ್ಲಾ ಸುದ್ದಿ
ತರಬೇತಿ ನಿರತ ಆರ್.ಎಫ್ ಓ. ಲತಾ ಭಟ್ಟ ಅವರಿಗೆ ಚಿನ್ನ ಮತ್ತು ಬೆಳ್ಳಿ ಪದಕ

ಕಾರವಾರ : ಹೊನ್ನಾವರ ತಾಲೂಕಿನ ಕವಲಕ್ಕಿಯ ಕುಮಾರಿ ಲತಾ ಭಟ್ಟ ಅವರು ಹಿಮಾಚಲ ಪ್ರದೇಶದ ಸುಂದರ ನಗರದಲ್ಲಿರುವ ರೇಂಜರ್ಸ್ ಕಾಲೇಜಿನಲ್ಲಿ ವಲಯ ಅರಣ್ಯಾಧಿಕಾರಿ ತರಬೇತಿಯನ್ನು ಮುಗಿಸಿದ್ದಾರೆ.
ಅರಣ್ಯ ಶಾಸ್ತ್ರದಲ್ಲಿ ಮತ್ತು ವಲಯ ಆಡಳಿತದಲ್ಲಿ ರಜತ ಪದಕ ಮತ್ತು ಎಲ್ಲ ವಿಷಯ ಗಳಲ್ಲಿ ಸಂಯುಕ್ತವಾಗಿ ಸ್ವರ್ಣ ಪದಕವನ್ನು ಪಡೆದಿದ್ದಾರೆ.
ಬಾಲ್ಯದಲ್ಲಿಯೇ ತಂದೆ, ತಾಯಿಯನ್ನು ಕಳೆದುಕೊಂಡು ಮಾವ ಎಸ್.ಆರ್.ಎಲ್. ಸಮೂಹ ಸಂಸ್ಥೆಯ ಮಾಲಕ ವೆಂಕಟರಮಣ ಹೆಗಡೆ ಮತ್ತು ಅತ್ತೆ ಗೀತಾ ಅವರ ಮಾರ್ಗದರ್ಶನದಲ್ಲಿ ಬೆಳೆದು ಓದಿದ್ದಾರೆ.
ವಿದ್ಯಾರ್ಥಿದೆಸೆಯಿಂದಲೇ ಓದಿನಲ್ಲಿ ಮುಂದಿದ್ದ ಲತಾ ಭಟ್ಟ ಅವರು ವಿದ್ಯಾರ್ಥಿ ವೇತನದಿಂದಲೇ ಶಿರಸಿ ಅರಣ್ಯ ಕಾಲೇಜಿನಲ್ಲಿ ಅರಣ್ಯ ಶಾಸ್ತ್ರದಲ್ಲಿ ಬಿ.ಎಸ್.ಸಿ.ಪದವಿ ಪಡೆದಿದ್ದಾರೆ.ಬಾಲ್ಯದಲ್ಲಿ ಆಶ್ರಯ ನೀಡಿದ ಹಾಗೂ ಮಗಳಂತೆ ಪೋಷಿಸಿದ ಅತ್ತೆ, ಮಾವ ಅವರನ್ನು ಲತಾ ಭಟ್ಟ ಅವರು ಸದಾ ಸ್ಮರಿಸಿಕೊಳ್ಳುತ್ತಾರೆ.