ಮೇಕೆ ಬೇಟೆಯಾಡಿದ ಚಿರತೆ – ಸಿಸಿಟಿವಿ ದೃಶ್ಯ ಕಂಡ ಗ್ರಾಮಸ್ಥರಲ್ಲಿ ಆತಂಕ

ಬಾಗಲಕೋಟೆ: ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅಳವಡಿಸಿರುವ ಸಿಸಿ ಟಿವಿ ಕ್ಯಾಮೆರಾದಲ್ಲಿ ಚಿರತೆ ಮೇಕೆ ಬೇಟೆಯಾಡಿದ ದೃಶ್ಯ ಸೆರೆಯಾಗಿದೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದ ತೋಟಗಳಲ್ಲಿ ಚಿರತೆ ಬೀಡುಬಿಟ್ಟಿದೆ. ನಿಂಗಪ್ಪ ಹೆಗಡೆ ಎಂಬುವರಿಗೆ ಸೇರಿದ ನಾಯಿಯನ್ನು ಚಿರತೆ ಅರೆಬರೆ ತಿಂದುಹಾಕಿತ್ತು.
ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಜಮಖಂಡಿ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಕಳೆದ ಎರಡು ದಿನಗಳಿಂದ ಅಪಾಯಕಾರಿ ಪ್ರಾಣಿಯೊಂದು ದಾಳಿ ಮಾಡುತ್ತಿರುವುದು ಗಮನಿಸಿ, ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಸಿಸಿಟಿವಿಯಲ್ಲಿ ಚಿರತೆ ಮೇಕೆ ಮೇಲೆ ದಾಳಿ ಮಾಡಿ ಬೇಟೆಯಾಡಿದ ದೃಶ್ಯ ಕಂಡು ಬಂದಿದ್ದು, ಚಿರತೆ ದಾಳಿಯಿಂದಾಗಿ ಸ್ಥಳೀಯರು ಆತಂಕಗೊಂಡಿದ್ದಾರೆ.
ಸ್ಥಳಕ್ಕೆ ಜಮಖಂಡಿ ಶಾಸಕ ಆನಂದ್ ನ್ಯಾಮಗೌಡ ಭೇಟಿ ನೀಡಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿರತೆ ಸೆರೆಹಿಡಿಯುವಂತೆ ಸೂಚನೆ ನೀಡಿದ್ದಾರೆ. ಇನ್ನು ಕುಂಬಾರಹಳ್ಳ ಗ್ರಾಮದ ಸುತ್ತಲೂ 10ಕಿಲೋ ಮೀಟರ್ ಚಿರತೆ ಓಡಾಟ ನಡೆಸುವ ಸಾಧ್ಯತೆಯಿದೆ. ಹೀಗಾಗಿ ಕುಂಬಾರ ಹಳ್ಳ ಗ್ರಾಮ ಸುತ್ತಲೂ ಗ್ರಾಮಸ್ಥರು, ರೈತರು ಮುಂಜಾಗ್ರತೆಯಲ್ಲಿರಬೇಕು, ಆದಷ್ಟು ಶೀಘ್ರದಲ್ಲಿ ಚಿರತೆ ಸೆರೆ ಹಿಡಿಯಲು ಅಧಿಕಾರಿಗಳು ಎಲ್ಲ ರೀತಿ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ರೈತರು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕು ಯಾರು ಭಯಪಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.