ಬೆಳಗಾವಿ ಲಾಕ್ಡೌನ್ ಮುಂದುವರೆಸಲು ಸಿಎಂಗೆ ಸಲಹೆ: ಡಿಸಿಎಂ ಗೋವಿಂದ ಕಾರಜೋಳ

ಬೆಳಗಾವಿ: ಬೆಳಗಾವಿ ಗಡಿ ಜಿಲ್ಲೆ ಆಗಿರುವುದರಿಂದ ಲಾಕಡೌನ್ ವಿಸ್ತರಿಸುವ ಅಗತ್ಯವಿದೆ ಎನಿಸಿದೆ. ನಾಳೆ ನಡೆಯಲಿರುವ ಸಭೆಯಲ್ಲಿ ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. ಅಲ್ಲದೆ ಚಿಕ್ಕೋಡಿ ಕೋವಿಡ್ ಪ್ರಯೋಗಾಲಯ ತಕ್ಷಣ ಆರಂಭಿಸಲು ಸೂಚನೆ ನೀಡಿದ್ದಾರೆ.
ಚಿಕ್ಕೋಡಿಯಲ್ಲಿ ಕೋವಿಡ್ ಪರೀಕ್ಷೆಯ ಆರ್.ಟಿ-ಪಿಸಿಆರ್ ಪ್ರಯೋಗಾಲಯ ಸ್ಥಾಪನೆಗೆ ಅನುಮತಿ ಲಭಿಸಿರುವುದರಿಂದ ಸಿವಿಲ್ ಕಾಮಗಾರಿಗೆ ಕಾಲಹರಣ ಮಾಡದೇ ಲಭ್ಯವಿರುವ ಕಟ್ಟಡಗಳನ್ನು ಬಳಸಿಕೊಂಡು ಕೂಡಲೇ ಪ್ರಯೋಗಾಲಯ ಆರಂಭಿಸಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದರು.
ಕೋವಿಡ್ ಹಾಗೂ ನೆರೆಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಪ್ರವಾಸಿಮಂದಿರದಲ್ಲಿ ಬುಧವಾರನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಬಿಮ್ಸ್ ಪ್ರಯೋಗಾಲಯದ ಮಾದರಿಯಲ್ಲಿ ಚಿಕ್ಕೋಡಿಯಲ್ಲಿ ಪ್ರಯೋಗಾಲಯವನ್ನು ಎರಡು ದಿನಗಳಲ್ಲಿ ಸಿದ್ಧಪಡಿಸಿಕೊಡುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಅಗತ್ಯವಿರುವ ಖಾಸಗಿ ವೈದ್ಯರನ್ನು ಅಥವಾ ನಿವೃತ್ತ ವೈದ್ಯರನ್ನು ಕೂಡ ಪಾವತಿ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲು ಸೂಚನೆ:
ಸಂಭವನೀಯ ಮೂರನೇ ಅಲೆಯ ವೇಳೆ ಮಕ್ಕಳಿಗೆ ಸೋಂಕು ತಗುಲಬಹುದು ಎಂಬ ವರದಿಗಳು ಇರುವುದರಿಂದ ಈ ಬಗ್ಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಸಚಿವ ಗೋವಿಂದ ಕಾರಜೋಳ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಬಿಮ್ಸ್ ಸೇರಿದಂತೆ ಎಲ್ಲ ತಾಲ್ಲೂಕುಗಳಲ್ಲಿ ಕೂಡ ಸೂಕ್ತ ವೈದ್ಯಕೀಯ ವ್ಯವಸ್ಥೆ ಸಿದ್ಧಪಡಿಸಿಕೊಳ್ಳಬೇಕು ಎಂದರು.
ಲಾಕಡೌನ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ವಿವಿಧ ವರ್ಗಗಳ ಜನರಿಗೆ ಸರಕಾರ ಒಟ್ಟಾರೆ ಎರಡು ಪ್ಯಾಕೇಜ್ ಗಳಲ್ಲಿ 1750 ಕೋಟಿ ರೂಪಾಯಿ ಪರಿಹಾರ ಧನ ಪ್ರಕಟಿಸಿದೆ. ಎಲ್ಲ ವರ್ಗಗಳ ಜನರಿಗೆ ಕೂಡಲೇ ಪರಿಹಾರಧನ ತಲುಪಿಸಲು ಕ್ರಮ ಕೈಗೊಳ್ಳವುದು,ಸಂಘಟಿತ ಕಾರ್ಮಿಕರ ಪಟ್ಟಿ ಇರುವುದರಿಂದ ಅವರಿಗೆ ನೇರವಾಗಿ ನೆರವು ತಲುಪಲಿದೆ. ಉಳಿದಂತೆ 11 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಪರಿಹಾರಧನ ವಿತರಿಸಬೇಕು ಎಂದು ಹೇಳಿದರು.