ಬಾಲ ಮಂದಿರದ ಮಕ್ಕಳಿಗೆ ಆಯುಷ್ ಔಷಧಿಗಳ ಕಿಟ್ ವಿತರಣೆ

ಬಾಗಲಕೋಟೆ : ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ಸರಕಾರಿ ಬಾಲಕಿಯರ ಬಾಲಮಂದಿರದ ಮಕ್ಕಳ ಆರೋಗ್ಯ ತಪಾಸಣೆ ಮಾಡುವ ಮೂಲಕ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಯುಷ್ ಔಷದಿಗಳ ಕಿಟ್ಗಳನ್ನು ವಿತರಿಸಲಾಯಿತು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಹಿರಿಯ ದಿವಾನಿ ನ್ಯಾಯಾಧೀಶ ರವೀಂದ್ರ ಹೊನೋಲೆ ಮಾತನಾಡಿ ಬಾಲ ಮಂದಿರದ ಮಕ್ಕಳಿಗೆ ಕೋವಿಡ್ ಮುನ್ನಚ್ಚರಿಕೆಯಾಗಿ ರೋಗ ನಿರೋದಕ ಶಕ್ತಿ ಹೆಚ್ಚಿಸುವ ಆಯುಷ್ ಔಷಧಿಗಳ ಕಿಟ್ ವಿತರಿಸಿರುವುದು ಹಾಗೂ ಆರೋಗ್ಯದ ಸಲಹೆಗಳಿಂದ ನೀಡಿದ್ದು, ಮಕ್ಕಳಿಗೆ ತುಂಬಾ ಅನುಕೂಲವಾಗಲಿದೆ ಎಂದು ತಿಳಿಸಿದರು.
ಸರಕಾರಿ ಆಯುರ್ವೇದ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಚಂದ್ರಕಾಂತ ರಕ್ಕಸಗಿ, ಮಾತನಾಡಿ ಕೋವೀಡ್-19 ಸಾಂಕ್ರಾಮಿಕ ರೋಗ ಮುನ್ನಚ್ಚರಿಕೆ ಕ್ರಮವಾಗಿ, ಆಹಾರ, ಯೋಗ, ಧ್ಯಾನ, ಪ್ರಾಣಾಯಾಮ, ನಿದ್ರೆ ಇವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ರೋಗ ನಿರೋಧಕ ಶಕ್ತಿ ವೃದ್ದಿಯಾಗುತ್ತದೆ ಎಂದು ತಿಳಿಸಿದರು.
ಸರಕಾರಿ ಆಯುರ್ವೇದ ಆಸ್ಪತ್ರೆಯ ತಜ್ಞ ವೈದ್ಯೆ ಡಾ.ಪ್ರತಿಭಾ ಅರ್ಕಸಾಲಿ ಅವರು ಬಾಲ ಮಂದಿರದ ಒಟ್ಟು 35 ಮಕ್ಕಳ ಆರೋಗ್ಯ ತಪಾಸಣೆ ಮಾಡಿದರು. ಕೋವೀಡ್-19 ಮುನ್ನೆಚ್ಚರಿಕೆಯಾಗಿ ರೋಗ ನಿರೋಧಕ ಶಕ್ತಿ ವೃದ್ದಿಸುವ ಔಷಧಿಗಳಾದ ಸಂಶಮನಿ ವಟಿ, ಅರ್ಸನಿಕ್-ಅಲ್ಬಮ್ ಹಾಗೂ ಅರ್ಕ-ಎ-ಅಜೀಬ್ ಈ ಔಷಧಿಗಳನ್ನು ಜಿಲ್ಲಾ ಆಯುಷ್ ಅಧಿಕಾರಿ ಡಾ.ಮಲ್ಲಣ್ಣ ತೋಟದ ಅವರು ಸರಕಾರಿ ಬಾಲಕಿಯರ ಬಾಲ ಮಂದಿರದ ಅಧೀಕ್ಷಕಿ ಜಯಮಾಲಾ ದೊಡಮನಿ ಅವರಿಗೆ ಆಯುಷ್ ಔಷಧಿಗಳ ಕಿಟ್ಗಳನ್ನು ಹಸ್ತಾಂತರಿಸಿದರು.