ಬಾಗಲಕೋಟೆಯಲ್ಲಿ ಸತ್ತ ವ್ಯಕ್ತಿಗೂ ವ್ಯಾಕ್ಸಿನ್ ಹಾಕಿದ ಮೆಸೇಜ್; ಆರೋಗ್ಯ ಇಲಾಖೆ ಎಡವಟ್ಟು

ಬಾಗಲಕೋಟೆ: ಆತ ಮರಣ ಹೊಂದಿದ್ದು ಮೇ 19, ಆತನಿಗೆ ಎರಡನೇ ಡೋಸ್ ಹಾಕಿದ ಮೆಸೇಜ್ ಬಂದಿದ್ದು ಜೂನ್ 05. ಅರೇ ಅದ್ಹೇಗೆ ಮೃತ ವ್ಯಕ್ತಿಗೆ ವ್ಯಾಕ್ಸಿನ್ ಹಾಕಿದರು ಅಂತೀರಾ?
ಹೌದು, ಬಾಗಲಕೋಟೆ ಜಿಲ್ಲೆ ಹುನಗುಂದ ಪಟ್ಟಣದ ಬಸವರಾಜ ಗೌಡರ ಎಂಬಾತ ಮೊದನೇ ಡೋಸ್ ಲಸಿಕೆ ಹಾಕಿಸಿಕೊಂಡಿದ್ದನು. ಮೇ 19ರಂದು ಉಸಿರಾಟದ ತೊಂದರೆಯಿಂದ ಚಿಕಿತ್ಸೆಗಾಗಿ ಪರದಾಡಿ ಬೆಡ್ ಸಿಗದೇ ಕೊನೆಗೆ ಮೃತಪಟ್ಟಿದ್ದನು. ಅದಾದ ಬಳಿಕ ಇದೀಗ ಜೂನ್ 05 ರಂದು ಅವರ ನೊಂದಾಯಿಸಿದ ಮೊಬೈಲ್ ಸಂಖ್ಯೆಗೆ ಎರಡನೆ ಡೋಸ್ ಲಸಿಕೆ ಹಾಕಿಸಿಕೊಂಡ ಬಗ್ಗೆ ಮೇಸೆಜ್ ಬಂದಿದೆ.
ಈ ಮೇಸೆಜ್ ನೋಡಿ ಕುಟುಂಬಸ್ಥರು ದಂಗಾಗಿ ಹೋಗಿದ್ದಾರೆ. ಬಸವರಾಜ ಗೌಡರ ಮೃತಪಟ್ಟು 17ದಿನವಾಗಿದೆ. ಮೃತಪಟ್ಟದೇಹ ಮಣ್ಣಲ್ಲಿ ಮಣ್ಣಾಗಿ ಹೋಗಿದೆ. ಇದೀಗ ಎರಡನೇ ಡೋಸ್ ಲಸಿಕೆ ಹಾಕಲಾಗಿದೆ ಎಂದು ಮೇಸೆಜ್ ನೋಡಿದರೆ ಆರೋಗ್ಯ ಇಲಾಖೆ ಅಧಿಕಾರಿಗಳು ಎಷ್ಟೊಂದು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಆರೋಗ್ಯ ಇಲಾಖೆ ಸಿಬ್ಬಂದಿ ಮಾಡಿರುವ ಮಹಾ ಎಡವಟ್ಟು.
ಸಂಕಷ್ಟದ ಸಂದರ್ಭದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೆ ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರ ಮಧ್ಯೆ ಇಂತಹ ಎಡವಟ್ಟು ಆಗದಿರಲಿ.