ಜಿಲ್ಲಾ ಸುದ್ದಿ

ಮೀನುಗಾರರ ಮನವಿ ಸ್ವೀಕರಿಸಲು ಬಾರದ ಸಚಿವ; ಮನವಿ ಪತ್ರ, ಹೂವುಗಳನ್ನು ಸಮುದ್ರಕ್ಕೆ ಅರ್ಪಿಸಿ ಮೀನುಗಾರರ ಪ್ರತಿಭಟನೆ

ವರದಿ: ತೇಜಸ್ವಿ

ಕಾರವಾರ : ಮೀನುಗಾರರ ಸಮಸ್ಯೆ ಆಲಿಸಲು ಬಾರದೇ ಇದ್ದುದರಿಂದ ಮೀನುಗಾರರು ಸಚಿವರಿಗೆ ನೀಡಬೇಕಿದ್ದ ಮನವಿ ಪತ್ರವನ್ನು ಸಮುದ್ರಕ್ಕೆ ಪೂಜೆ ಸಲ್ಲಿಸಿ,ಸಮುದ್ರಕ್ಕೆ ಮನವಿ ಪತ್ರವನ್ನು ಅರ್ಪಿಸುವ ಮೂಲಕ ಹೊನ್ನಾವರದ ಕಾಸರಕೋಡು ಬಂದರಿನಲ್ಲಿ ಮೀನುಗಾರರು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಇಂದು ಹೊನ್ನಾವರದಲ್ಲಿ ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರು ಭೇಟಿ ನೀಡಿದ್ದರು.ಈ ಹಿನ್ನೆಲೆಯಲ್ಲಿ ಕಾಸರಕೋಡು ಬಂದರಿನಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಿಸದಂತೆ ಮೀನುಗಾರರು ಸಚಿವರಿಗೆ ಮನವಿ ಸಲ್ಲಿಸಲು ಹಾಗೂ ಸ್ವಾಗತಿಸಲು ಸಿದ್ದತೆ ಮಾಡಿಕೊಂಡಿದ್ದರು.

ಆದರೆ ವಿವಾದಿತ ಪ್ರದೇಶವೆಂದು ಸಚಿವರು ತಮ್ಮ ಬಂದರು ಭೇಟಿಯನ್ನು ರದ್ದುಗೊಳಿಸಿ ಉಡುಪಿಗೆ ಪ್ರಯಾಣ ಬೆಳೆಸಿದರು.

ತಮ್ಮ ಸಮಸ್ಯೆ ಆಲಿಸದಿದ್ದುದಕ್ಕೆ ನೊಂದ ಮೀನುಗಾರರು ಸಚಿವರಿಗೆ ಸಲ್ಲಿಸಬೇಕಿದ್ದ ಮನವಿ ಪತ್ರ ಹಾಗೂ ಸ್ವಾಗತಿಸಲು ತಂದಿದ್ದ ಹೂವಿನ ಪುಷ್ಪಗುಚ್ವವನ್ನು ಸಮುದ್ರಕ್ಕೆ ಪೂಜೆ ಸಲ್ಲಿಸಿ ಬಿಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಮನವಿ ಪತ್ರದಲ್ಲಿ ಏನಿತ್ತು ? ಸಚಿವರು ಬಾರದೇ ಇರುವುದಕ್ಕೆ ಕಾರಣ ಏನು ?

ಮೀನುಗಾರರಿಗೆ ಸರ್ಕಾರ ಘೋಷಣೆ ಮಾಡಿದ ಪರಿಹಾರದಲ್ಲಿ ಮೀನುಗಾರಿಕಾ ವಿವಿಧ ಅವಲಂಭಿತ ಕಾರ್ಮಿಕರಿಗೆ ಆದೇಶದಲ್ಲಿ ಸೂಚಿಸಿಲ್ಲ. ಪರಿಹಾರ ಪ್ಯಾಕೇಜ್ ನಲ್ಲಿ ಗೊಂದಲ ಇದೆ.ಎಲ್ಲಾ ಮೀನುಗಾರಿಕಾ ಅವಲಂಭಿತ ಕಾರ್ಮಿಕರಿಗೂ ಪರಿಹಾರ ನೀಡಬೇಕು ಎಂಬ ಮನವಿಯನ್ನು ಪತ್ರದಲ್ಲಿ ಉಲ್ಲೇಖ ಮಾಡಲಾಗಿತ್ತು.

ಇನ್ನು ಬಂದರಿನಲ್ಲಿ ಮೀನುಗಾರಿಕಾ ಮಹಿಳೆಯರಿಗೆ ಸಮಸ್ಯೆ,ಒಣಮೀನು ಒಣಗಿಸಲು ಸ್ಥಳಾವಕಾಶದ ಸಮಸ್ಯೆ ಕುರಿತು ಮನವಿ ಪತ್ರವನ್ನು ಹೊನ್ನಾವರ ಮೀನುಗಾರರ ಸೊಸೈಟಿ, ಮೀನುಗಾರರ ಕಾರ್ಮಿಕರ ಸಂಘ,ಹಸಿಮೀನು ವ್ಯಾಪಾರಿಗಳ ಸಂಘ, ಪರ್ಷಿಯನ್ ಬೋಟ್ ಯೂನಿಯನ್ ಗಳು ಸಲ್ಲಿಸಿ ತಮ್ಮ ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತರುವುದರಲ್ಲಿ ಇದ್ದರು.ಆದರೆ ಸಚಿವರು ಕೊನೆ ಕ್ಷಣದಲ್ಲಿ ಇಲ್ಲಿಗೆ ಬಾರದೇ ನೇರ ಉಡುಪಿ ಕಡೆ ಪ್ರಯಾಣಿಸಿದ್ದಾರೆ.

ವಿವಾದ ಮತ್ತು ಗಲಾಟೆ ?

ಹೊನ್ನಾವರದಲ್ಲಿ ಕಾಸರಕೋಡು ಬಂದರು ವಿವಾದ ವರ್ಷಗಳಿಂದ ನಡೆಯುತ್ತಿದೆ. ಬಂದರಿನ ಬಳಿಯಲ್ಲಿಯೇ ಹೊನ್ನಾವರ ಪೋರ್ಟ್ ಕಂಪನಿ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಮಾಡುತ್ತಿದೆ.ಇದಕ್ಕೆ ಮೀನುಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.ಈ ವಿಷಯ ಕೋರ್ಟ್ ನಲ್ಲಿದೆ.ಈ ಕುರಿತು ಸಚಿವರಿಗೆ ಮೀನುಗಾರರು ಮನವಿ ಪತ್ರ ಸಲ್ಲಿಸುತ್ತಾರೆ ಹಾಗೂ ಗಲಾಟೆ ಮಾಡುತ್ತಾರೆ ಎಂಬ ಸಂದೇಶವನ್ನು ಸಚಿವರಿಗೆ ಅವರ ಆಪ್ತ ಮೂಲಗಳು ತಪ್ಪಾಗಿ ಮಾಹಿತಿ ನೀಡಿದೆ. ಹೀಗಾಗಿ ಮೊದಲೇ ನಿರ್ಧಾರವಾಗಿದ್ದ ಕಾಸರಕೋಡು ಬಂದರು ಭೇಟಿಯನ್ನು ಗಲಾಟೆಯಾಗಬಹುದು ಎಂಬ ನೆಪದಲ್ಲಿ ಸಚಿವರು ಕೊನೆ ಕ್ಷಣದಲ್ಲಿ ಮೊಟಕುಗೊಳಿಸಿದ್ದಾರೆ ಎಂಬ ಮಾಹಿತಿ ಅವರ ಆಪ್ತ ಮೂಲದಿಂದ ತಿಳಿದುಬಂದಿದೆ.

ಆದರೆ ಇದೇ ಮೊದಲ ಬಾರಿಗೆ ಈ ಭಾಗದಲ್ಲಿ ಮೀನುಗಾರರ ಸಮಸ್ಯೆ ಆಲಿಸಲು ಹಾಗೂ ಅಭಿವೃದ್ಧಿ ಕಾರ್ಯ ವೀಕ್ಷಿಸಲು ಬಂದ ಸಚಿವರು ಹೀಗೆ ಏಕಾಏಕಿ ಮೀನುಗಾರರ ಸಮಸ್ಯೆ ಆಲಿಸದೇ,ಅತೀ ಅವಶ್ಯ ಕಾರ್ಯ ಇಲ್ಲದಿದ್ದರೂ ಕಾರ್ಯಕ್ರಮವನ್ನೇ ಮೊಟಕು ಗೊಳಿಸಿ ತೆರಳಿದ್ದು ಮೀನುಗಾರರಲ್ಲಿ ಬೇಸರ ಮೂಡಿಸಿದೆ.

Spread the love

Related Articles

Leave a Reply

Your email address will not be published. Required fields are marked *

Back to top button