ಉತ್ತರ ಕನ್ನಡಜಿಲ್ಲಾ ಸುದ್ದಿ

ಪಾಳು ಬಿದ್ದ ಕೃಷಿ ಭೂಮಿ ಗೇಣಿ ಪಡೆದು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿದ ಶಾಸಕಿ ರೂಪಾಲಿ ನಾಯ್ಕ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಶಾಸಕಿ ರೂಪಾಲಿ ನಾಯ್ಕ ಅವರು ಕಾರವಾರ ಹಾಗೂ ಅಂಕೋಲಾ ಭಾಗದ ಪಾಳು ಬಿದ್ದ ಕೃಷಿ ಭೂಮಿಯನ್ನು ಗೇಣಿಗೆ ಪಡೆದು ಸಾವಯವ ಪದ್ದತಿಯಲ್ಲಿ ಉಳುಮೆಗೆ ಮುಂದಾಗಿದ್ದಾರೆ.

ಅಂಕೋಲಾದಲ್ಲಿ 25 ಎಕರೆ ಹಾಗೂ ಕಾರವಾರದಲ್ಲಿ 25 ಎಕರೆ ಪಾಳು ಬಿದ್ದ ಕೃಷಿ ಜಮೀನನ್ನು ರೈತರಿಂದ ಗೇಣಿಗೆ ಪಡೆದು ಸಾವಯವ ಪದ್ದತಿಯಲ್ಲಿ ಉಳುಮೆ ಮಾಡಲು ಮುಂದಾಗಿದ್ದಾರೆ.

ಗದ್ದೆಯಲ್ಲಿ ಟ್ರಾಕ್ಟರ್ ಚಲಾಯಿಸಿ ಉಳುಮೆ ಮಾಡಿದ ಶಾಸಕಿ :

ಕಾರವಾರ – ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅಂಕೋಲಾ ತಾಲೂಕಿನ ವಂದಿಗೆ ಗ್ರಾಮದ ಗದ್ದೆಯಲ್ಲಿ ಟ್ರ್ಯಾಕ್ಟರ್‌ ಚಲಾಯಿಸಿ ಉಳುಮೆ ಮಾಡಿದರು. ಫಲವತ್ತತೆಯೆಡೆಗೆ ಮೊದಲ ಹೆಜ್ಜೆ ಎಂಬ ಕೃಷಿ ಚಟುವಟಿಕೆಗೆ ವಿನೂತನವಾಗಿ ಚಾಲನೆ ನೀಡಿದರು.

ಕಾರವಾರ – ಅಂಕೋಲಾ ಕ್ಷೇತ್ರದಲ್ಲಿ ಕೃಷಿ ಚಟುವಟಿಕೆ ಉತ್ತೇಜಿಸಲು ಮತ್ತು ಯುವ ಜನರನ್ನು ಕೃಷಿಯತ್ತ ಆಕರ್ಷಿಸಲು 50 ಎಕರೆ ಗೇಣಿ ಭೂಮಿ ಪಡೆದು ಕೃಷಿ ಮಾಡುವುದಾಗಿ ಶಾಸಕಿ ಹಿಂದೆ ತಿಳಿಸಿದ್ದರು.

ನಷ್ಟದ ಭಯದಿಂದ ಜನತೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಯುವಕರು ಕೃಷಿ ಬಿಟ್ಟ ಪರಿಣಾಮ ಭೂಮಿ ಬಂಜರಾಗುತ್ತಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಆಹಾರ ಮತ್ತು ಕೃಷಿ ಅಗತ್ಯ ಜನರಿಗೆ ಅರ್ಥವಾಗಿದೆ. ತಾಲೂಕಿನ ಕೃಷಿ ವಿಧಾನದಲ್ಲಿ ಬದಲಾವಣೆ ತರಲು ಮತ್ತು ರೈತರನ್ನು ಉತ್ತೇಜಿಸಲು ಈ ಪ್ರಯತ್ನ ಆರಂಭಿಸಿದ್ದೇನೆ. ಇದು ನನ್ನ ಕನಸಿನ ಕೂಸು. ಮುಂದಿನ ದಿನಗಳಲ್ಲಿ ತಾಲೂಕಿನ ಎಪಿಎಂಸಿ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸಿ, ಸ್ಥಳೀಯ ರೈತರಿಗೆ ಹೆಚ್ಚಿನ ಸೌಲಭ್ಯ ಸಿಗುವಂತೆ ಪ್ರಯತ್ನಿಸುತ್ತೇನೆ ಎಂದು ಶಾಸಕಿ ರೂಪಾಲಿ ಹೇಳಿದರು.

ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ನುಡಿದಂತೆ ನಡೆಯುವುದು ರಾಜಕೀಯದಲ್ಲಿ ವಿರಳ. ಶಾಸಕಿ ರೂಪಾಲಿ ಗದ್ದೆಗಿಳಿದು ಕೃಷಿಯಲ್ಲಿ ತೊಡಗಿಸಿಕೊಂಡು ಮಾದರಿಯಾಗಿದ್ದಾರೆ. ಅಭಿವೃದ್ಧಿ ಚಟುವಟಿಕೆಯಲ್ಲಿಯೂ ಮುಂದಿದ್ದಾರೆ ಎಂದರು.

ಶಾಸಕರು ಕೃಷಿಗೆ ಮುಂದಾಗಿದ್ದೇಕೆ ?

ಕಾರವಾರ – ಅಂಕೋಲಾ ಭಾಗದಲ್ಲಿ ನೂರಾರು ಎಕರೆ ಕೃಷಿ ಭೂವಿ ಪಾಳು ಬಿದ್ದಿದೆ. ರೈತಾಪಿ ಮಾಡುವ ಜನರು ಕೃಷಿಯಲ್ಲಿ ನಷ್ಟವಾಗುತ್ತಿರುವುದರಿಂದ ತಮ್ಮ ಕಸುಬನ್ನು ಬಿಟ್ಟು ಇತರೆ ಕೆಲಸದಲ್ಲಿ ನಿರತರಾಗಿದ್ದಾರೆ.ಹೀಗಾಗಿ ಕಾರವಾರದಲ್ಲಿ ಭತ್ತ, ತರಕಾರಿ, ಹೈನೋದ್ಯಮ ನೆಲ ಕಚ್ಚಿದೆ. ಕಾರವಾರದಲ್ಲಿ ಇರುವ ಎಪಿಎಂಸಿ ಕೂಡ ವಹಿವಾಟು ಇಲ್ಲದೇ ಮುಚ್ಚಿಹೋಗಿದೆ. ಇನ್ನು ಹಲವರು ಕೃಷಿ ಭೂಮಿ ಇದ್ದರೂ ಚಿಕ್ಕ ಭೂಮಿಯಲ್ಲಿ ಲಾಭದ ಬೆಳೆ ಬೆಳೆಯಲಾಗದೇ ಪಾಳು ಬಿಟ್ಟಿದ್ದಾರೆ. ಹೀಗಾಗಿ ಕೃಷಿಗೆ ಒತ್ತು ಕೊಡುವ ನಿಟ್ಟಿನಲ್ಲಿ ಹೊಸ ಪ್ರಯತ್ನಕ್ಕೆ ತಳಪಾಯ ಹಾಕಿರುವ ರೂಪಾಲಿ ನಾಯ್ಕರವರು ತಾವೇ ಸ್ವತಃ ಕೃಷಿ ಭೂಮಿ ಗೇಣಿಗೆ ಪಡೆದಿದ್ದಾರೆ.

ತಾವು ಪಡೆದ ಭೂವಿಯಲ್ಲಿ ಸಾವಯವ ಪದ್ದತಿಯಲ್ಲಿ ಮೊದಲು ಭತ್ತ ನಂತರ ಬೇಸಿಗೆಯಲ್ಲಿ ತರಕಾರಿ ಹಾಗೂ ಹೈನುಗಾರಿಕೆ ಸಹ ಪ್ರಾರಂಭಿಸಲು ಮುಂದಾಗಿರುವ ಇವರು ಗೋವುಗಳಿಗಾಗಿ ಮೇವನ್ನು ಸಹ ಬೆಳೆಯಲು ಮುಂದಾಗಿದ್ದಾರೆ. ಈ ಮೂಲಕ ತಮ್ಮ ಕ್ಷೇತ್ರದ ಜನರಿಗೆ ಕೃಷಿ ಮಾಡುವ ಮೂಲಕ ಪ್ರೇರಣೆಯಾಗುವ ದಿಕ್ಕಿನಲ್ಲಿ ಹೊಸ ಪ್ರಯತ್ನಕ್ಕೆ ಅಡಿ ಇಟ್ಟಿದ್ದಾರೆ. ಜೊತೆಗೆ ತಮ್ಮ ಬೆಂಬಲಿಗರಿಗೂ ಕೃಷಿ ಮಾಡಲು ಪ್ರೇರಣೆ ನೀಡಿದ್ದು, ಇದೀಗ ಕಾರವಾರ – ಅಂಕೋಲಾ ಭಾಗದಲ್ಲಿ ಪಾಳು ಬಿದ್ದ ಕೃಷಿ ಭೂಮಿ ಹಸಿರಿನಿಂದ ಕಂಕೊಳಿಸಲು ಸಿದ್ದವಾಗಿದ್ದು, ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button