ರಾಮನಗರದಲ್ಲಿ ನಿತ್ಯ 2000ಕ್ಕೂ ಹೆಚ್ಚು ಕೋವಿಡ್ ಟೆಸ್ಟ್; ಉಸ್ತುವಾರಿ ಕಾರ್ಯದರ್ಶಿ ಸೂಚನೆ

ರಾಮನಗರ: ಜಿಲ್ಲೆಯಲ್ಲಿ ಸರಾಸರಿ ಪ್ರತಿದಿನ 350 ರಿಂದ 400 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಸಂಪರ್ಕಕ್ಕೆ ಬರುವವರು ಸೇರಿದಂತೆ ಪ್ರತಿನಿತ್ಯವೂ ಕೋವಿಡ್-19 ಪರೀಕ್ಷೆಯ ಪ್ರಮಾಣವನ್ನು ಕನಿಷ್ಠವೆಂದರೂ 2100ಕ್ಕೆ ಹೆಚ್ಚಿಸುವಂತೆ ನಗರಾಭಿವೃದ್ಧಿ ಮತ್ತು ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾಗಿರುವ ತುಷರ್ ಗಿರಿನಾಥ್ ಜಿಲ್ಲಾಡಳಿತಕ್ಕೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.
ಅವರು ಇಂದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿದ್ದ ಕೋವಿಡ್-19 ಪ್ರಗತಿ ಪರಿಶೀಲಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೋಮ್ ಐಸೋಲೇಷನ್:
ಜಿಲ್ಲೆಯಲ್ಲಿ ಹೋಮ್ ಐಸೋಲೇಷನ್ ಸಂಖ್ಯೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿತಗೊಳಿಸಲಾಗಿದೆ. ಸೋಂಕಿಗೆ ಒಳಗಾಗುವವರಿಗೆ ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ಗೆ ಸೇರಿಸಲಾಗುತ್ತಿದೆ. ಇದರಿಂದಾಗಿ ಗ್ರಾಮೀಣ ಮಟ್ಟದಲ್ಲಿ ಸೋಂಕು ಹರಡುವುದನ್ನು ತಪ್ಪಿಸಲಾಗುತ್ತಿದೆ. ಜಿಲ್ಲೆಯಲ್ಲಿ 1650 ಮಂದಿ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿ ಜಿಲ್ಲಾ ಪಂಚಾಯಿತಿ ಮುಖ್ಯಾಕಾರ್ಯನಿರ್ವಹಕ ಅಧಿಕಾರಿ ಇಕ್ರಂ ಅವರು ಮಾಹಿತಿ ನೀಡಿದರು.
ಲಸಿಕೆ:
ಜಿಲ್ಲೆಯಲ್ಲಿ ಒಟ್ಟಾರೆ 12 ಲಕ್ಷ ಜನಸಂಖ್ಯೆ ಇದೆ. ಈ ಪೈಕಿ 8.5 ಲಕ್ಷ ಮಂದಿಗೆ ಲಸಿಕೆ ನೀಡಬೇಕಾಗಿರುತ್ತದೆ. 45 ವರ್ಷ ಮೇಲ್ಪಟ್ಟವರ ಸಂಖ್ಯೆ 3 ಲಕ್ಷದಷ್ಟಿದೆ. ಇವರುಗಳ ಪೈಕಿ ಇದುವರೆಗೆ ಮೊದಲ ಡೋಸ್ ಆಗಿ 1.83 ಲಕ್ಷ ಮಂದಿಗೆ ಲಸಿಕೆ ನೀಡಾಗಿದೆ. ಇನ್ನು 1.17 ಲಕ್ಷ ಮಂದಿಗೆ ಲಸಿಕೆ ನೀಡಬೇಕಾಗಿದೆ. ಎಂದು ಜಿಲ್ಲಾ ಪಂಚಾಯಿತಿ ಮುಖ್ಯಾ ಕಾರ್ಯನಿರ್ವಹಕ ಅಧಿಕಾರಿ ಇಕ್ರಂ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಪ್ರತಿನಿತ್ಯವೂ 5500 ಮಂದಿಯಿಂದ 6000 ಮಂದಿಗೆ ಲಸಿಕೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರಮಾಣವನ್ನು ಮತ್ತಷ್ಟು ಹೆಚ್ಚಳ ಮಾಡಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವುದನ್ನು 15 ದಿನಗಳ ಒಳಗಾಗಿ ಪೂರ್ಣಗೊಳಿಸುವಂತೆ ಉಸ್ತುವಾರಿ ಕಾರ್ಯದರ್ಶಿಗಳು ತಿಳಿಸಿದರು.
ಜಿಲ್ಲೆಯಲ್ಲಿ 18 ರಿಂದ 45 ವರ್ಷದೊಳಗಿನವರ ಸಂಖ್ಯೆ 5.13 ಲಕ್ಷದಷ್ಟಿದೆ. ಮುಂದಿನ ದಿನಗಳಲ್ಲಿ ಈ ವರ್ಗದ ಜನರಿಗೆ ಲಸಿಕೆ ನೀಡುವ ವ್ಯವಸ್ಥೆಗೆ ಸಂಬಂಧಿಸಿದಂತೆ ಸೂಕ್ತ ರೂಪು ರೇಷಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳುವಂತೆ ಆರೋಗ್ಯ ಇಲಾಖೆಗೆ ಪ್ರಧಾನ ಕಾರ್ಯದರ್ಶಿಗಳು ತಿಳಿಸಿದರು.
ಬಂದೋಬಸ್ತ್:
ಜಿಲ್ಲೆಯ ಪಡಿತರ ವಿವರಣಾಕೇಂದ್ರ ಹಾಲಿನ ಬೂತ್, ಬೇರೆ ಬೇರೆ ವ್ಯಾಪಾರಿಗಳು ಸೇರಿದಂತೆ ಕೆಲವು ಕಡೆಗಳಲ್ಲಿ ದೈಹಿಕ ಅಂತರ ಪಾಲನೆಯಾಗುತ್ತಿಲ್ಲ. ಇಂತಹ ಕಡೆಗಳಲ್ಲಿ ಕಟ್ಟುನಿಟ್ಟಾಗಿ ಮಾಸ್ಕ್ ಧರಿಸುವುದು, ಸ್ಸಾನಿಟೈಸರ್ ಮತ್ತು ದೈಹಿಕ ಅಂತರವನ್ನು ಪಾಲಿಸುವುದನ್ನು ಕಡ್ಡಾಯಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸುವಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ನಗರಾಭಿವೃದ್ಧಿ ಪ್ರಧಾನ ಕಾರ್ಯದರ್ಶಿಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ: ನಿರಂಜನ್, ಆರ್.ಸಿ.ಹೆಚ್ ಅಧಿಕಾರಿ ಡಾ: ಪದ್ಮಾ ಮತ್ತು ಆರೋಗ್ಯ ಇಲಾಖೆಯ ಇನ್ನಿತರ ಅಧಿಕಾರಿಗಳು ಹಾಜರಿದ್ದರು.