ತಾಲ್ಲೂಕುವಾರು ತಲಾ 1 ಕೆ.ಎಲ್ ಆಕ್ಸಿಜನ್ ಸಂಗ್ರಹ ಟ್ಯಾಂಕರ್ ಆಳವಡಿಕೆಗೆ ಸಚಿವ ಡಾ.ನಾರಾಯಣಗೌಡ ಸೂಚನೆ

ಮಂಡ್ಯ : ಜಿಲ್ಲೆಯಲ್ಲಿ ತಾಲ್ಲೂಕುವಾರು ತಲಾ 1 ಕೆ.ಎಲ್ ಆಕ್ಸಿಜನ್ ಸಂಗ್ರಹ ಟ್ಯಾಂಕರ್ ಆಳವಡಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಸೂಚನೆ ನೀಡಿದರು.
ನಗರದ ಮಿಮ್ಸ್ ನಲ್ಲಿ ಕೋವಿಡ್ -19 ಸಂಬಂಧ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಲಸಿಕೆ ಕೊರತೆ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಗೊಂಡಿರವುದನ್ನು ಉಲ್ಲೇಖಿಸಿ ಮಾತನಾಡಿದ ಅವರು, ಪ್ರಸುತ್ತ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಕೊರತೆ ಇಲ್ಲ, ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವ ದಿನವಾರು ಲಸಿಕೆಗೆ ತಕ್ಕಂತೆ ಟೋಕನ್ ವಿತರಿಸಿ ಲಸಿಕೆ ನೀಡಲು ಕ್ರಮವಹಿಸಿ ಎಂದು ತಿಳಿಸಿದರು.
45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ ಹಾಗೂ ಜಿಲ್ಲೆಯಲ್ಲಿ ಕೊರೊನಾ ಮುಂಚೂಣಿ ಕಾರ್ಯಕರ್ತ ರೊಂದಿಗೆ ಸರ್ಕಾರ ಸೂಚಿಸಿದ ಆದ್ಯತಾ ವಲಯ ಮತ್ತು ಗುಂಪುಗಳಿಗೆ ಕೊರೊನಾ ಲಸಿಕೆ ನೀಡಲು ಶುರು ಮಾಡಲಾಗಿದೆ ಎಂದರು.
ಸಾರ್ವಜನಿಕರಿಗೆ ಅನಗತ್ಯ ಗೊಂದಲ ಉಂಟಾಗದಂತೆ ಗ್ರಾಮೀಣ ಮಟ್ಟದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು ಮುಂದೆ ಹೀಗೆ ಆದ್ಯತೆ ವಲಯಕ್ಕೆ ಲಸಿಕೆ ನೀಡುತ್ತಿದ್ದು ಅಧಿಕ ಲಸಿಕೆ ಬಂದ ಕೂಡಲೇ 18 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೂ ಲಸಿಕೆ ಕೊಡಲಾಗುವುದು ಎಂದು ಅವರು ತಿಳಿಸಿದರು.
ಇದಲ್ಲದೇ ಅಂಗವಿಕಲರು, ಕೈದಿಗಳು, ಚಿತಾಗಾರ ಮತ್ತು ಸ್ಮಶಾನಗಳಲ್ಲಿ ಕೆಲಸ ಮಾಡುವರು, ಕ್ಯಾಬ್ ಚಾಲಕರು, ಆಟೋ ಚಾಲಕರು, ಬೀದಿ ವ್ಯಾಪಾರಿಗಳು, ಕೊರೊನಾ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು, ನೀರು ಸರಬರಾಜು ಮತ್ತು ವಿದ್ಯುತ್ ಪೂರೈಕೆ ಕಾರ್ಮಿಕರಿಗೆ ಆದ್ಯತೆ ವಲಯದ ಆಧಾರದ ಮೇಲೆ ಲಸಿಕೆ ನೀಡಲಾಗುತ್ತಿದೆ ಎಂದರು.
ಜಂಬೂ ಸಿಲಿಂಡರ್ ಬದಲಾಗಿ ಪ್ರತಿ ತಾಲ್ಲೂಕು ಕೇಂದ್ರದಲ್ಲಿ 1 KL ಸಾಮರ್ಥ್ಯ ಯುಳ್ಳ ಶಾಶ್ವತ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಕ್ರಮಕೈಗೊಂಡಿದ್ದು ಇದರಿಂದ ಸಾರಿಗೆ ವೆಚ್ಚ, ಇನ್ನಿತರ ವೆಚ್ಚವು ಕಡಿಮೆಯಾಗಲಿದೆ ಎಂದರು.
ಜಿಲ್ಲೆಯಲ್ಲಿ ರೆಮಿಡಿಸಿವರ್ ದಾಸ್ತಾನು ಇದ್ದು, ಈ ಸಂಬಂಧ ಯಾವುದೇ ಸಮಸ್ಯೆ ಇಲ್ಲ , ಇನ್ನು ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ಸಂಬಂಧ 5 ಪ್ರಕರಣಗಳು ಕಂಡು ಬಂದಿದ್ದು, ನಮ್ಮಲ್ಲಿ ಬ್ಲಾಕ್ ಫಂಗಸ್ ಚಿಕಿತ್ಸೆಗೆ ಆ್ಯಂಫೊಟೆರಿಸಿನ್ ಲಸಿಕೆ 2 ದಿನಕ್ಕೆ ಆಗುವಷ್ಟು ಲಭ್ಯವಿದ್ದು, 5 ದಿನಕ್ಕೆ ಆಗುವಷ್ಟು ಲಸಿಕೆಗೆ ಪಡೆಯಲು ಕ್ರಮಕೈಗೊಳ್ಳಲಾಗಿದೆ ಎಂದರು.