ಸಿ.ಟಿ.ರವಿ ತಾವೇ ಅಕ್ಕಿ ಕೊಟ್ಟಿರುವುದಾಗಿ ಸುಳ್ಳು ಪ್ರಚಾರ? ಕಳ್ಳಿಕೊಪ್ಪಲು ಗ್ರಾಮದಲ್ಲಿ ರೊಚ್ಚಿಗೆದ್ದ ಜನ

ಚಿಕ್ಕಮಗಳೂರು: ಸರ್ಕಾರದಿಂದ ಸಿಗುವ ಅಕ್ಕಿಯನ್ನೇ ತಂದು ಕೊಟ್ಟು ಸ್ವತಃ ತಾವೇ ಉಚಿತವಾಗಿ ಕೊಟ್ಟಿರುವುದಾಗಿ ಶಾಸಕ ಸಿ ಟಿ ರವಿ ಅವರು ಹೇಳಿಕೊಂಡಿರುವುದೇಕೆ ಎಂದು ಕಳಸಾಪುರ ಸಮೀಪದ ಕಳ್ಳಿಕೊಪ್ಪಲು ಗ್ರಾಮದ ಪಡಿತರ ಚೀಟಿದಾರರು ಪ್ರಶ್ನಿಸಿದ್ದಾರೆ.
ಕೋವಿಡ್ ಪರಿಸ್ಥಿತಿಯನ್ನು ಅರಿತು ಶಾಸಕ ಸಿ.ಟಿ.ರವಿ ಅಧಿಕಾರಿಗಳ ಜತೆ ತೆರಳಿ 10 ಕೆಜಿ ಅಕ್ಕಿ ಸಹಿತ ಆಹಾರದ ಕಿಟ್ ವಿತರಿಸಿದ್ದರು. ಇವೆಲ್ಲ ಉಚಿತವಾಗಿ ನೀಡಿದ್ದಾರೆಂದು ಜನ ಸಂತೋಷಗೊಂಡಿದ್ದರು. ಆದರೆ, ಈ ಬಾರಿ ನ್ಯಾಯಬೆಲೆ ಅಂಗಡಿಗೆ ಹೋದಾಗ ಸತ್ಯಾಂಶ ಬಯಲಾಗಿದೆ.
ನಿಮಗೆ ಸಿಗಬೇಕಾದ ಪಡಿತರವನ್ನು ಈಗಾಗಲೇ ವಿತರಿಸಿಯಾಗಿದೆ ಎಂದು ವಿತರಕರು ಹೇಳಿದ್ದಾರೆ. ಆಗ ರೊಚ್ಚಿಗೆದ್ದ ಜನ ನ್ಯಾಯಬೆಲೆ ವಿತರಕರ ಮುಂದೆ ರೇಗಾಡಿದ್ದಾರೆ. ಶಾಸಕರು ಬಂದು ಪಡಿತರ ಸಾಮಗ್ರಿ ಕೊಟ್ಟಿದ್ದಾರಲ್ಲ. ಇನ್ನೆಲ್ಲಿಂದ ನಿಮಗೆ ಸಿಗುತ್ತದೆ ಎಂದು ವಿತರಕ ಪ್ರಶ್ನಿಸಿದಾಗ, ಜನ ಕೋಪಗೊಂಡು ನಮ್ಮ ಅಕ್ಕಿ ನಮಗೇ ಕೊಟ್ಟು ಸ್ವತಃ ತಾವೇ ಉಚಿತವಾಗಿ ಕೊಟ್ಟಿರೋದಾಗಿ ಶಾಸಕರು ಫೋಟೋ ತೆಗೆದಿಕೊಳ್ಳುವುದು ಏನಿತ್ತು ಎಂದು ಪ್ರಶ್ನಿಸಿರುವ ವಿಡಿಯೋ ಈಗ ಎಲ್ಲೆಡೆ ಹರಿದಾಡತೊಡಗಿದೆ.