ಅಕ್ರಮ ಮದ್ಯ ಮಾರಾಟ, ಜೂಜಾಟಕ್ಕೆ ಕಾದಿದೆ ಶಿಕ್ಷೆ

ರಾಜೇಶ್ ಕೊಂಡಾಪುರ
ರಾಮನಗರ: ಲಾಕ್ ಡೌನ್ ಆರಂಭವಾದ ದಿನದಿಂದಲೂ ಗ್ರಾಮೀಣ ಭಾಗದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಈಗ ಹಳ್ಳಿಗಳಲ್ಲಿ ಜೂಜಾಟ ಹಾಗೂ ಅಕ್ರಮ ಮದ್ಯ ಮಾರಟ ಮಾಡುತ್ತಿರುವುದಕ್ಕೆ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಅಕ್ರಮ ಚಟುವಟಿಕೆಗಳು ನಡೆಸುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ.
ಕೋವಿಡ್ ನೆಪ ಮಾಡಿಕೊಂಡು ಹಳ್ಳಿಗಳಲ್ಲಿ ಪಾರ್ಟಿ ಮೋಜು ಮಸ್ತಿ ಮಾಡುವ ಮೂಲಕ ಜೂಜಾಟ ಸೋಂಕು ಹರಡಲು ಕಾರಣವಾಗುತ್ತಿರುವವರ ಮೇಲೆ ರಾಮನಗರ ಜಿಲ್ಲಾ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಗ್ರಾಮೀಣ ಭಾಗದ ತೋಟಗಳಲ್ಲಿ ಗುಂಪು ಸೇರುವ ಯುವಕರು ಮಾಂಸದೂಟದೊಂದಿದೆ ಎಣ್ಣೆ ಪಾರ್ಟಿ ಮಾಡಿಕೊಂಡು ಜೂಜಾಟವಾಡುವ ಜನರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಜೂಜಾಟದಲ್ಲಿ ಸಿಕ್ಕಿ ಬೀಳುವ ಜನರ ಮೇಲೆ ಕೂಡಲೇ ರೌಡಿ ಶೀಟರ್ ತೆರೆದು ಜೈಲಿಗಟ್ಟಲಿದ್ದಾರೆ.
ಈ ಮೊದಲು ಪೊಲೀಸರು ಬಂಧಿಸಿ 87 ಕೆಪಿ (ಕರ್ನಾಟಕ ಪೊಲೀಸ್ ಅ್ಯಕ್ಟ್) ಪ್ರಕರಣ ದಾಖಲಿಸಿ ಠಾಣೆಯ ಜಾಮೀನು ನೀಡಿ ಬಿಡುಗಡೆ ಮಾಡುತ್ತಿದ್ದರು. ಆದ್ರೆ, ಕೋವಿಡ್ ನಿಂದ ಕಠಿಣ ಕ್ರಮ ಕೈಗೊಂಡಿದ್ದು, ಆಪಿಡೆಮಿಕ್ ಹಾಗೂ ಡಿಎಂಎ ಅ್ಯಕ್ಟ್ ಅಡಿ ಪ್ರಕರಣ ದಾಖಲಿಸಿ ನ್ಯಾಯಲಯಕ್ಕೆ ಆರೋಪಿಗಳನ್ನ ಹಾಜರು ಪಡಿಸಲಿದ್ದಾರೆ. ಪ್ರಮುಖವಾಗಿ ಈ ಪ್ರಕರಣದಲ್ಲಿ ಸಿಕ್ಕಿಬೀಳುವವರ ಮೇಲೆ ಕೂಡಲೇ ರೌಡಿ ಶೀಟರ್ ತೆರೆದು, ಜೈಲಿಗಟ್ಟಲಿದ್ದಾರೆ.
ಅಂದಹಾಗೆ, ಲಾಕ್‌ಡೌನ್ ವೇಳೆ ಹಳ್ಳಿ ಸೇರಿರುವ ಯುವ ಸಮೂಹ ತೋಟಗಳಲ್ಲಿ ಗುಂಪುಗೂಡುತ್ತಿದ್ದಾರೆ. ಇದರೊಂದಿಗೆ ಮಾಂಸದೂಟ ಮಾಡಿಕೊಂಡು ಗುಂಡಿನ ಪಾರ್ಟಿಯನ್ನು ನಡೆಸುತ್ತಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಜೂಜಾಟ ಆಡುತ್ತಿದ್ದಾರೆ. ಇಂತಹ ಪ್ರಕರಣಗಳಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸೋಂಕು ಹೆಚ್ಚಾಗಿ ಹರಡುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಠಾಣಾ ಜಾಮೀನು ಸಿಗುತ್ತದೆ ಎಂಬುದರಿಂದ ಕೆಲವರು ರಾಜರೋಷವಾಗಿಯೇ ಜೂಜಾಟವಾಡುತ್ತಿದ್ದರು. ಅಪ್ಪಿತಪ್ಪಿ ಪೊಲೀಸರ ಕೈಗೆ ಸಿಕ್ಕಿಬಿದ್ದರೆ, ಠಾಣಾ ಬೇಲ್ ಪಡೆದು, ನೆಮ್ಮದಿಯಾಗಿ ಓಡಾಡುತ್ತಿದ್ದರು. ಆದರೆ ಈಗ ಪೊಲೀಸರು ಮಾಡುತ್ತಿರುವ ಈ ಉತ್ತಮ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮಾರಾಟ ಮತ್ತು ಜೂಜಾಟಕ್ಕೆ ಕಡಿವಾಣ ಬೀಳಬಹುದೆ ಎಂಬ ನಿರೀಕ್ಷೆಯೂ ಮೂಡಿದೆ.
————
ಅಕ್ರಮ ಮದ್ಯ ಮಾರಾಟ ಮತ್ತು ಜೂಜಾಡುವವರು ಮತ್ತು ತೋಟ-ತುಡಿಕೆಗಳಲ್ಲಿ ಪಾರ್ಟಿ, ಮೋಜು ಮಸ್ತಿ ಮಾಡುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿ ಕೃತ್ಯದಲ್ಲಿ ತೊಡಗಿದವರ ವಿರುದ್ಧ ರೌಡಿಶೀಟರ್ ಪಟ್ಟಿಗೆ ಸೇರಿಸಲಾಗುವುದು. ಸಾರ್ವಜನಿಕರು ಕೂಡ ಇಂತಹ ಘಟನೆಗಳು ನಡೆಯುತ್ತಿದ್ದರೆ ಪೊಲೀಸರ ಗಮನಕ್ಕೆ ತರಬೇಕು.
-ಎಸ್. ಗಿರೀಶ್, ಎಸ್ಪಿ, ರಾಮನಗರ