ಕ್ರೀಡೆಜಿಲ್ಲಾ ಸುದ್ದಿರಾಜ್ಯ

ಖೇಲೋ ಇಂಡಿಯಾ ಯೋಜನೆಗೆ ಕೊಡಗಿನ ಪೊನ್ನಂಪೇಟೆ ಆಯ್ಕೆ

ವರದಿ: ಇಂದ್ರೇಶ್

ಮಡಿಕೇರಿ: ಹಾಕಿಯ ತವರೂರು ಎಂದೇ ಪ್ರಸಿದ್ದಿಯಾಗಿರುವ ಪುಟ್ಟ ಜಿಲ್ಲೆ ಕೊಡಗು. ದೇಶದ ಕ್ರೀಡಾ ರಂಗಕ್ಕೆ ನೂರಾರು ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಕ್ರೀಡಾಪಟುಗಳ ಕೊಡುಗೆ ನೀಡಿದೆ. ಇದೀಗ ಕೇಂದ್ರ ಸರಕಾರ ಖೇಲೋ ಇಂಡಿಯಾ ಯೋಜನೆಗೆ ನೂತನವಾಗಿ ರಚಿತವಾದ ಪೊನ್ನಂಪೇಟೆ ತಾಲ್ಲೂಕನ್ನು ಅಯ್ಕೆ ಮಾಡಿಕೊಂಡಿರುವುದು ಜಿಲ್ಲೆಯ ಜನತೆಯಲ್ಲಿ ಸಂತಸ ಮೂಡಿಸಿದೆ.

ರಾಷ್ಟ್ರೀಯ ಕ್ರೀಡಾಪಟುಗಳ ಹುಡುಕಾಟ ಹಾಗೂ ತಯಾರಿಗೆ ಭಾರತದ ಸುಮಾರು 172 ಜಿಲ್ಲೆಗಳನ್ನು ಆಯ್ಕೆ ಮಾಡಿ‌ ‘ಖೇಲೋ ಇಂಡಿಯಾ’ ಎನ್ನುವ ವಿನೂತನ ಕ್ರೀಡಾ ಯೋಜನೆಯನ್ನು ಅನುಷ್ಠಾನ ಮಾಡಲು, ಅಧಿಕೃತ ಚಾಲನೆ ನೀಡಿದೆ. ಈ ಯೋಜನೆಯಂತೆ ಕರ್ನಾಟಕದ ಮೂವತ್ತೊಂದು ಜಿಲ್ಲೆಯಲ್ಲೂ ಪ್ರತಿ ಜಿಲ್ಲೆಗೆ, ಆಯಾ ಜಿಲ್ಲೆಯ ಕ್ರೀಡಾಸಕ್ತಿ‌ಗೆ ಅನುಸಾರ ಒಂದೊಂದು ಯೂನಿಟ್ ಅನ್ನು ಸ್ಥಾಪಿಸುವಂತೆ ಕೇಂದ್ರ ಕ್ರೀಡಾ ಮಂತ್ರಿ ಕಿರಣ್ ರಜು ಹಾಗೂ ಖೇಲೋ ಇಂಡಿಯಾದ ಮುಖ್ಯ ನಿರ್ದೇಶಕ ಸತ್ಯನಾರಾಯಣ ಮೀನಾ ಅವರು ಅಧಿಕೃತ ಆದೇಶ ಪತ್ರವನ್ನು ರವಾನಿಸಿದ್ದಾರೆ.

ಈ ಅಭೂತಪೂರ್ವ ಯೋಜನೆಯ ಗುರಿ ಒಲಿಂಪಿಕ್ ಆಗಿದ್ದು. ದೇಶದಿಂದ ಕ್ರೀಡಾಪಟುಗಳನ್ನು ಹೆಕ್ಕಿ, ತಯಾರಿಸಿ ಚಿನ್ನ ತರಲು ತಯಾರಿಸಿ, ಸಜ್ಜುಮಾಡಿ ಕಳುಹಿಸುವಲ್ಲಿ ಈ ಯೋಜನೆ ಬಹುಮುಖ್ಯ ‌ಪಾತ್ರ ವಹಿಸಲಿದೆ.

ಆಯಾ ಜಿಲ್ಲೆಯ ಕ್ರೀಡಾ ಆಸಕ್ತಿ ಅನುಸಾರ ‘ಖೇಲೋ‌ ಇಂಡಿಯ’ ಆಯ್ಕೆ ಮಾಡಲಾಗಿರುವ ಪ್ರತಿ ಜಿಲ್ಲೆಯಲ್ಲೂ ಒಂದೊಂದು ಘಟಕ‌ ಸ್ಥಾಪಿಸುವ ಕೆಲಸ ಶುರುಮಾಡಿಕೊಂಡಿದೆ. ಇದರಂತೆ ಕೊಡಗಿನ ಸಾಂಪ್ರದಾಯಿಕ ಕ್ರೀಡೆ ಹಾಕಿಯನ್ನು ಈ‌ ಯೋಜನೆ‌ ಆಯ್ಕೆಮಾಡಿದ್ದು. ಕೊಡಗಿನ ನೂತನ ತಾಲೂಕು ಪೊನ್ನಂಪೇಟೆಯಲ್ಲಿ ಘಟಕ‌ ಸ್ಥಾಪಿಸುವಂತೆ ಆದೇಶ ಹೊರಡಿಸಿರುವುದು ಕೊಡಗಿನ ಅದರಲ್ಲೂ ದಕ್ಷಿಣ ಕೊಡಗಿನ ಕ್ರೀಡಾಸಕ್ತರಿಗೆ ಸಂತೋಷವನ್ನು ನೀಡಿದೆ.

ಈ ಕುರಿತು ಪ್ರತಿಕ್ರಿಯಿಸಿದ ಹಾಕಿ ಪಟು ಹಾಗೂ ಒಲಿಂಪಿಕ್ಸ್ ಆಟಗಾರ ಡಾ. ಎ.ಬಿ‌ ಸುಬ್ಬಯ್ಯ ಹಲವಾರು ಜನಪ್ರತಿನಿಧಿಗಳ ಪ್ರಯತ್ನದ ಫಲವಾಗಿ ಇದೀಗ ಪೊನ್ನಂಪೇಟೆಗೆ ಈ ಅಭೂತಪೂರ್ವ ಅವಕಾಶ ಒದಗಿಬಂದಿದೆ. ಈ ಯೋಜನೆಯಿಂದ ಕೊಡಗಿನ ಕ್ರೀಡಾಪಟುಗಳಿಗೆ ಸುವರ್ಣಾವಕಾಶ ಉಂಟಾಗಿದ್ದು. ಅಂತರಾಷ್ಟ್ರೀಯ ಮಟ್ಟಕ್ಕೆ ಕೊಡಗಿನ ಹಾಕಿ ಕ್ರೀಡಾಪಟುಗಳು ತಲುಪಲು ಈ ಯೋಜನೆ ಸಹಕಾರಿಯಾಗಿದೆ ಎಂದು ಹರ್ಷವ್ಯಕ್ತಪಡಿಸಿದರು.

ಈ ಯೋಜನೆಯು ಕೇಂದ್ರ ಸರ್ಕಾರದ ಕನಸಾಗಿದ್ದು. ಫಲಾನುಭವಿಗಳು ಹಾಗೂ ಕ್ರೀಡಾಪಟುಗಳಿಗೆ ಬಂಪರ್ ಯೋಜನೆಯಾಗಿದೆ. ಪ್ರತ್ಯೇಕ ‌ತರಬೇತಿದಾರರು, ಕೇಂದ್ರದ ಕ್ರೀಡಾ ನಿಧಿಯಿಂದ ಅನುಧಾನ ಹಾಗೂ ಇನ್ನಿತರ ಭಾರಿ‌ ಸೌಲಭ್ಯಗಳನ್ನು ‘ಖೇಲೋ ಇಂಡಿಯಾ” ಗುರುತಿಸಲ್ಪಟ್ಟಿರುವ ಜಿಲ್ಲೆಯ ಘಟಕಕ್ಕೆ ನೀಡುತ್ತದೆ. ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗುವ ಪ್ರತಿ‌ ಆಟಗಾರನಿಗೂ ಬಂಪರ್ ಕೊಡುಗೆಯನ್ನು ಈ ಯೋಜನೆ ನೀಡುತ್ತದೆ. ಅಂತರಾಷ್ಟ್ರೀಯ ಮಟ್ಟಕ್ಕೆ ಕ್ರೀಡಾಪಟು ಮುಂದುವರೆಯಲು ಬೇಕಾದ ಸರ್ವಸಕಲ ಸಿದ್ಧತೆಯನ್ನು ಖೇಲೋ ಇಂಡಿಯಾ ಯೋಜನೆ ನೀಡುತ್ತದೆ. ಈ‌ ಯೋಜನೆ‌ ಕೊಡಗಿನ ಹಾಕಿ ಪಟುಗಳಿಗೆ ಹೊಸದೊಂದು ನಿರೀಕ್ಷೆ ಹುಟ್ಟು ಹಾಕಿದೆ.

ಕೊಡಗಿನ ಹಾಕಿ ದಂತಕಥೆಗಳು ಮರುಕಳಿಸಲಿ, ಹೊಸ ಪ್ರತಿಭಾವಂತ ಆಟಗಾರರು ಭಾರತೀಯ ತಂಡವನ್ನು, ಈ‌ ಯೋಜನೆಯನ್ನು ಬಳಸಿಕೊಂಡು ಪ್ರತಿನಿಧಿಸಲಿ ಯಶಸ್ಸು ಕಾಣಲಿ ಎಂಬುದು ಕೊಡಗಿನ ಕ್ರೀಡಾಸಕ್ತ ಮನಸ್ಸುಗಳ ಆಶಯ.

Spread the love

Related Articles

Leave a Reply

Your email address will not be published. Required fields are marked *

Back to top button