ಯೋಗೀಶ್ವರ್ ವಿರುದ್ಧ ಮಾತನಾಡಿದರೆ ನಾವು ಸುಮ್ಮನಿರುವುದಿಲ್ಲ; ಬೆಂಬಲಿಗರ ಎಚ್ಚರಿಕೆ

ವರದಿ: ರಾಜೇಶ್ ಕೊಂಡಾಪುರ
ರಾಮನಗರ: ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಬೆಂಬಲಿಗರು ಪತ್ರಿಕಾಗೋಷ್ಠಿ ನಡೆಸಿದ್ದು, ಯೋಗಿಶ್ವರ್ ವಿರುದ್ಧ ಮಾತನಾಡಿದವರ ಬಗ್ಗೆ ಕಿಡಿ ಕಾರಿದ್ದಾರೆ.
ನಮ್ಮ ನಾಯಕನ ಬಗ್ಗೆ ಹಲವು ಶಾಸಕರು ಹಿಡಿತವಿಲ್ಲದ ಮಾತುಗಳನ್ನ ಆಡಿದ್ದಾರೆ. ಯೋಗೀಶ್ವರ್ ವಾರಕ್ಕೊಮ್ಮೆ ದೆಹಲಿಗೆ ಹೋಗುತ್ತಾರೆ. ಆದರೆ ಅದನ್ನೇ ಸರ್ಕಾರ ಬೀಳಿಸುವ ಹುನ್ನಾರ ಮಾಡುತ್ತಿದ್ದಾರೆಂದು ಬಿಂಬಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಕೆಲ ಶಾಸಕರು ಬಾಯಿಗೆ ಬಂದತೆ ಮಾತನಾಡುತ್ತಿದ್ದಾರೆ. ನಮ್ಮ ಶಾಸಕರ ತೇಜೋವಧೆ ಮಾಡುತ್ತಿದ್ದಾರೆ. ಇದೇ ರೇಣುಕಾಚಾರ್ಯ ಯಡಿಯೂರಪ್ಪ ಮತ್ತು ವಿಜೇಯೆಂದ್ರ ವಿರುದ್ಧ ನಿಂತಿದ್ದರು. ನಮ್ಮ ನಾಯಕರ ವಿರುದ್ಧ ಮಾತನಾಡಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೇಣುಕಾಚಾರ್ಯ ಇತಿಹಾಸ ರಾಜ್ಯದ ಎಲ್ಲಾ ಜನರಿಗೂ ಗೊತ್ತಿದೆ. ನಮ್ಮ ನಾಯಕರು ಯಡಿಯೂರಪ್ಪ ವಿರುದ್ಧ ಮಾತನಾಡಿಲ್ಲ. ಎರಡು ಮೂರು ಮಂದಿ ಶಾಸಕರು ಮಾತ್ರ ನಮ್ಮ ನಾಯಕರ ವಿರುದ್ಧ ಮಾತನಾಡುತ್ತಿದ್ದಾರೆ.
ಮುಂದೆ ಇದೇ ರೀತಿ ಮಾತನಾಡಿದ್ರೆ ಅವರ ಮನೆ ಮುಂದೆ ಕ್ಷೇತ್ರದ ಜನ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಿಎಂ ವಿರುದ್ಧವೂ ಕಿಡಿ:
ಜಿಲ್ಲೆಯಲ್ಲಿ ಯೋಗೇಶ್ವರ್ ಅವರಿಗೆ ಸರಿಯಾದ ಸಹಕಾರ ಮುಖ್ಯಮಂತ್ರಿಗಳಿಂದ ಸಿಗುತ್ತಿಲ್ಲ. ಯೋಗೇಶ್ವರ್ ಅವರಿಗೆ ಸರಿಯಾಗಿ ಬೆಲೆ ನೀಡುತ್ತಿಲ್ಲ. ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರ ನಡುವಿನ ಹೊಂದಾಣಿಕೆಯಿಂದಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಪ್ರತಿಪಕ್ಷದ ನಾಯಕರೋಂದಿಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಿರುವ ಕಾರಣಪಕ್ಷ ಸಂಘಟನೆಗೆ ತೊಂದರೆಯಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿನಿಧಿಸುತ್ತಿರುವ ಈ ಜಿಲ್ಲೆಯಲ್ಲಿ ಬಿಜೆಪಿಯನ್ನು ಬಲಗೊಳಿಸಲು ಯೋಗೇಶ್ವರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕ ಮಾಡಬೇಕಿತ್ತು. ಆದರೆ, ಮುಖ್ಯಮಂತ್ರಿಗಳು ಕುಮಾರಸ್ವಾಮಿ ಅವರ ಮಾತು ಕೇಳಿ ಮಾಡಲಿಲ್ಲ. ಯೋಗೇಶ್ವರ್ ಅವರ ಸೇವೆಯನ್ನು ಬಳಸಿಕೊಳ್ಳಲು ಹಳೇಮೈಸೂರು ಭಾಗದ ಯಾವುದಾದರೂ ಜಿಲ್ಲಾ ಲಉಸ್ತುವಾರಿ ನೀಡದೆ ಸುಮ್ಮನೆ ಕೂರಿಸಿರುವುದು ಸರಿಯಲ್ಲವೆಂದು ಸಿಎಂ ಅವರ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಲವೇಗೌಡ, ತಾ.ಪಂ. ಮಾಜಿ ಅಧ್ಯಕ್ಷ ರಾಜಣ್ಣ ಸೇರಿ ಹಲವು ಮುಖಂಡರು ಸುದ್ದಿಗೋಷ್ಟಿಯಲ್ಲಿ ಹಾಜರಿದ್ದರು.