ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ; ಎಸ್ಐ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

ಚನ್ನಪಟ್ಟಣ: ಚಿಕ್ಕಮಗಳೂರಿನ ಮೂಡಿಗೆರೆಯ ಗೋಣಿ ಬೀಡು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅರ್ಜುನ್ ರವರನ್ನು ಕೂಡಲೇ ಸೇವೆಯಿಂದ ವಜಾ ಮಾಡಿ ಕಾನೂನು ಕ್ರಮ ಕೈಗೊಳ್ಳವಂತೆ ಆಗ್ರಹಿಸಿ ಚನ್ನಪಟ್ಟಣದಲ್ಲಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.
ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ 22 ವರ್ಷದ ಪುನೀತ್ ಎಂಬ ದಲಿತ ಯುವಕನಿಗೆ ಕೈ ಕಾಲು ಕಟ್ಟಿ ಹಾಕಿ ತೀವ್ರವಾಗಿ ದೌರ್ಜನ್ಯ ನಡೆಸಿ ಚಿತ್ರಹಿಂಸೆ ನೀಡಿ ಮೂತ್ರ ಕುಡಿಸಿದಲ್ಲದೆ ನೆಲದಲ್ಲಿ ಬಿದ್ದ ಮೂತ್ರವನ್ನು ನೆಕ್ಕುವಂತೆ ಗೋಣಿಬೀಡಿನ ಪಿಎಸ್ಐ ಅರ್ಜುನ್ ಅಮಾನುಷ ವರ್ತನೆಯನ್ನು ಪ್ರತಿಭಟನಾ ನಿರತ ಮುಖಂಡರು ಖಂಡಿಸಿದರು.
ದೌರ್ಜನ್ಯ ನಡೆಸಿದ ಗೋಣಿಬೀಡು ಪಿಎಸ್ಐ ಅವರನ್ನು ಕೇವಲ ವರ್ಗಾವಣೆ ಮಾಡಿ, ಕ್ರಮ ಕೈಗೊಳ್ಳುವಂತೆ ಕಣ್ಣೊರೆಸುವ ತಂತ್ರ ನಡೆಸಲಾಗಿದೆ. ಇದು ಸರಿಯಲ್ಲ. ಯುವಕನೊಂದಿಗೆ ಅನಾಗರಿಕವಾಗಿ ನಡೆದುಕೊಂಡು ಅತ್ಯಂತ ಹೇಯ ಕೃತ್ಯ ಎಸಗಿರುವ ಪಿಎಸ್ಐಯನ್ನು ತಕ್ಷಣ ಅಮಾನತುಪಡಿಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಜೀವಿಕ ಸಂಚಾಲಕ ಪಟ್ಲು ಗೋವಿಂದರಾಜು ಎಚ್ಚರಿಕೆ ನೀಡಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ, ಕಾಂಗ್ರೆಸ್ ಮುಖಂಡ ಮತ್ತೀಕೆರೆ ಹನುಮಂತಯ್ಯ, ದಸಂಸ ತಾಲೂಕು ಸಂಚಾಲಕ ಸೇಠು ವೆಂಕಟೇಶ್ ಮುಂತಾದವರಿದ್ದರು.