ರೈತ ವಿರೋಧಿ ನೀತಿ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ

ರಾಮನಗರ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಖರೀದಿ ಕೇಂದ್ರ ಮೂಲಕ ಖರೀದಿಸಲಾದ ಭತ್ತ, ರಾಗಿ, ಜೋಳ ಇನ್ನಿತರ ಬೆಳೆಗಳಿಗೆ ಸರ್ಕಾರ ಇನ್ನು ಹಣ ಪಾವತಿಸಿಲ್ಲ. ಕಬ್ಬು ಕಾರ್ಖಾನೆಗಳೂ ಕೂಡ ರೈತರ ಬಾಕಿ ಉಳಿಸಿಕೊಂಡಿವೆ. ಪ್ರಧಾನ ಮಂತ್ರಿ ಫಸಲು ಬಿಮಾ ಯೋಜನೆ ಪರಿಹಾರದ ಹಣ ಲಕ್ಷಾಂತರ ರೈತರಿಗೆ ಬರಬೇಕಿದೆ. ಬರ ಮತ್ತು ಅತೀವೃಷ್ಟಿಯಿಂದಾದ ನಷ್ಟಕ್ಕೆ ಪರಿಹಾರ ರೈತರ ಖಾತೆಗೆ ಇನ್ನೂ ಜಮಾ ಆಗಿಲ್ಲ. ರೈತರು ಹಾಗೂ ಕೃಷಿ ಕಾರ್ಮಿಕರು ಸಂಕಷ್ಟದ ಜೀವನ ನಡೆಸುವಂತಾಗಿದೆ ಎಂದು ಆರೋಪಿಸಿದರು.
ಇಂತಹ ಸಂಕಷ್ಟದ ಸಂದರ್ಭದಲ್ಲೇ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸುವ ಮೂಲಕ ಸರ್ಕಾರವೇ ಜನರನ್ನು ಲೂಟಿ ಮಾಡುತ್ತಿದೆ. ತಾನೇನು ಕಮ್ಮಿ ಇಲ್ಲ ಎಂಬಂತೆ ರಾಜ್ಯ ಸರ್ಕಾರ ಕೂಡ ವಿದ್ಯುತ್ ದರವನ್ನು ಹೆಚ್ಚಿಸುವ ಮೂಲಕ ಜನರ ಜೇಬಿಗೆ ಕತ್ತರಿ ಹಾಕಿದೆ ಎಂದು ದೂರಿದರು.
ಜನ ಸಾಮಾನ್ಯರಿಗಾಗಿ ಸರ್ಕಾರ ಭಿಕ್ಷಾ ರೂಪದ ಪ್ಯಾಕೇಜ್ ಘೋಷಿಸಿ ಹೊಣೆಗಾರಿಕೆಯಿಂದ ನುಣುಚಿಕೊಂಡಿದೆ. ರೈತರನ್ನು ಉದ್ಧಾರ ಮಾಡುವುದಾಗಿ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಬಳಿಕ ರೈತರನ್ನೇ ಶೋಷಿಸುವುದು ಇದುವರೆಗೂ ನಮ್ಮನ್ನಾಳಿದ ಎಲ್ಲಾ ರಾಜಕಾರಣಿಗಳ ಸಹಜ ಸ್ವಭಾವವಾಗಿದೆ. ಸರ್ಕಾರಗಳು ಕೂಡಲೇ ತಮ್ಮ ಧೋರಣೆಯನ್ನು ಬದಲಿಸಿಕೊಂಡು ಅನ್ನದಾತ ರೈತರ ನೆರವಿಗೆ ಮುಂದಾಗಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರೈತರು ಎಚ್ಚರಿಸಿದ್ದಾರೆ.