ಕನಕಪುರ ತಾಲೂಕಿನಲ್ಲಿ ಫುಡ್ ಕಿಟ್ ವಿತರಣೆ

ರಾಮನಗರ: ಚುನಾವಣೆ ಸಂದರ್ಭದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಿ ಮತಪಡೆಯುವುದು ಮುಖ್ಯವಲ್ಲ, ಕೊರೊನಾ ಸಂಕಷ್ಟದಿಂದ ಬೆಡ್ ಸಿಗದೆ, ಆಕ್ಸಿಜನ್ ಸಿಗದೆ, ಚಿಕಿತ್ಸೆ ಸಿಗದೆ¸ ಸಂಕಷ್ಟದಲ್ಲಿ ಒದ್ದಾಡುತ್ತಿರುವ ಜನತೆಗೆ ಸ್ಪಂದಿಸುವುದೇ ಮುಖ್ಯ, ನಿಜವಾದ ಮಾನವೀಯತೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಹೋಬಳಿ ಹೊನ್ನಾಲಗನದೊಡ್ಡಿ ಗ್ರಾಮದಲ್ಲಿ ಕೊಳ್ಳಿಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತೆಗೆ ಪಕ್ಷದ ವತಿಯಿಂದ ಉಚಿತವಾಗಿ ರೇಷನ್ ಕಿಟ್ ವಿತರಣೆ ಮಾಡಿ ಮಾತನಾಡಿ, ಇಂದು ನಾವು ಎಂಥ ಕಾಲದಲ್ಲಿದ್ದೇವೆ ಎಂದರೆ, ಮುಖವನ್ನು ಮುಚ್ಚಿಕೊಂಡು ಓಡಾಡುವ ಕೆಟ್ಟ ಪರಿಸ್ಥಿತಿಯಲ್ಲಿದ್ದೇವೆ. ಮುಖವನ್ನು ಮುಚ್ಚದೆ ಓಡಾಡಿದರೆ ಜನರು ದೂರು ಸರಿಯುತ್ತಾರೆ.ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಜನರಿಂದ ದೂರವಾಗಿ ಮನೆಯಲ್ಲೇ ಕೂರುವುದುನ್ಯಾಯವಲ್ಲ, ನಮ್ಮನ್ನು ನಂಬಿದ್ದ ಜನರಿಗೆ ನಾವು ಮಾಡಿದ ಮೋಸವಾಗುತ್ತದೆ,ನಾವು ಅವರ ಕಷ್ಟದಲ್ಲಿ ಭಾಗಿಯಾಗಬೇಕು ಎಂದರು.
ಕೋವಿಡ್ ನ ೨ ನೇ ಅಲೆಯಲ್ಲಿ ನಾವು ಸಾಕಷ್ಟು ಸಾವು ನೋವು ಕಂಡಿದ್ದೇವೆ. ಕುಟುಂಬಕ್ಕೆ ಆಧಾರವಾಗಿದ್ದವರನ್ನು ಕಳೆದುಕೊಂಡಿದ್ದಾರೆ. ಮಕ್ಕಳು ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಯಾರು ಕೋವಿಡ್ ಬಗ್ಗೆ ನಿರ್ಲಕ್ಷ ಮಾಡಬೇಡಿ, ಸೋಂಕು ಕಡಿಮೆಯಾಗಿದ್ದರು, ಲಾಕ್ಡೌನ್ ಸಡಿಲವಾಗಿದ್ದರೂ ಅನಗತ್ಯವಾಗಿ ಹೊರಗಡೆ ಬರಬೇಡಿ ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎ.ಇಕ್ಬಾಲ್ ಹುಸೇನ್ ಮಾತನಾಡಿ, ಕೋವಿಡ್ ಕಾಯಿಲೆಯು ಕೆಟ್ಟಕಾಯಿಲೆಯಾಗಿದ್ದು ಈ ಸಂಕಷ್ಟದ ಸಮಯದಲ್ಲಿ ನೊಂದ ಜನರ ಪರವಾಗಿ ನಿಲ್ಲುವಂತೆ ಪಕ್ಷದ ವರಿಷ್ಠರಾದ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ನೀಡಿದ ಸೂಚನೆ ಮೇರೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಉಚಿತವಾಗಿ ರೇಷನ್ ಕಿಟ್ ಕೊಡುತ್ತಿರುವುದಾಗಿ ತಿಳಿಸಿದರು.
ಕೊರೊನಾ ಕಾಯಿಲೆಯನ್ನು ನಾವು ಒಟ್ಟಾಗಿ ಹೆದರಿಸಬೇಕಿದೆ. ಅದಕ್ಕಾಗಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಸಂಕಷ್ಟದಲ್ಲಿರುವ ಜನರಪರವಾಗಿ ಕೆಲಸ ಮಾಡುತ್ತಿದ್ದಾರೆ. ನಾವು ಪಕ್ಷತೀತವಾಗಿ
ಮತ್ತು ಧರ್ಮಾತೀತವಾಗಿ ರೇಷನ್ ಕಿಟ್, ಕೊರೊನಾ ಕಿಟ್, ಮಾಸ್ಕ್, ಸ್ಯಾನಿಟೈಸರ್ನ್ನು ಜನರ ಮನೆಯ ಬಾಗಿಲಿಗೆ ತಲುಪಿಸುತ್ತಿದ್ದೇವೆ ಎಂದರು.
ಟಿ.ಹೊಸಳ್ಳಿ, ಮರಳವಾಡಿ, ಯಲಚವಾಡಿ ಮತ್ತು ಕೊಳ್ಳಿಗನಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ರೇಷನ್ ಕಿಟ್ ವಿತರಿಸಲಾಯಿತು.
ಎಂಎಲ್ಸಿ ಎಸ್. ರವಿ, ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ಎಚ್ ಎಸ್ ಹರೀಶ್ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎನ್.ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಲುವರಾಜು, ಮುಂತಾದವರಿದ್ದರು.