ಚನ್ನಪಟ್ಟಣದ ೨೨ ದೇವಾಲಯಗಳ ಬಳಿ ಯಾತ್ರಿ ನಿವಾಸಕ್ಕೆ ಅಸ್ತು

ರಾಮನಗರ: ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್, ಚನ್ನಪಟ್ಟಣ ತಾಲೂಕಿನ ೨೨ ಪ್ರಮುಖ ದೇವಾಲಯಗಳ ಬಳಿ ಯಾತ್ರಿ ನಿವಾಸ ನಿರ್ಮಾಣಕ್ಕೆ ೫.೫೦ ಕೋಟಿ ರೂ. ಹಣವನ್ನು ತಮ್ಮ ಇಲಾಖೆಯ ವತಿಯಿಂದ ಬಿಡುಗಡೆ ಮಾಡಿಸಿದ್ದಾರೆ.
ಚನ್ನಪಟ್ಟಣ ತಾಲೂಕಿನ ಪ್ರಮುಖ ದೇವಾಲಯಗಳಾದ ಕೆಂಗಲ್ ಆಂಜನೇಯಸ್ವಾಮಿ, ಕೂರಣಗೆರೆ ಬೆಟ್ಟ ಹಾಗೂ ದೊಡ್ಡಮಳೂರಿನ ಅಪ್ರಮೇಯಸ್ವಾಮಿ ದೇವಾಲಯ,
ದೇವರಹೊಸಹಳ್ಳಿ ಸಂಜೀವರಾಯಸ್ವಾಮಿ ದೇವಾಲಯ, ಮಹದೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ಒಟ್ಟು ೨೨ ದೇವಾಲಯಗಳ ಸಮೀಪ ಭಕ್ತರಿಗೆ ಅನುಕೂಲವಾಗುವಂತೆ ತಲಾ ೨೫ ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಾಣ ಕಾಮಗಾರಿಗೆ ಯೋಗೇಶ್ವರ್ ತಮ್ಮ ಇಲಾಖೆಯಿಂದ ಮಂಜೂರಾತಿ ಕೊಡಿಸಿದ್ದಾರೆ.
ತಾಲೂಕಿನ ಎ ದರ್ಜೆ ದೇವಾಲಯಗಳ ಜತೆಗೆ ಸುಳ್ಳೇರಿ ಪಟ್ಟಲದಮ್ಮ ದೇವಾಲಯ,
ಗರಕಹಳ್ಳಿ ಸಿದ್ದೇಶ್ವರ ಬೆಟ್ಟ, ಗುಡಿ ಸರಗೂರಿನ ಬಸವೇಶ್ವರ ದೇವಾಲಯ ಸೇರಿದಂತೆ
ಎಲ್ಲಾ ಪ್ರಮುಖ ದೇವಾಲಯಗಳ ಸಮೀಪ ಯಾತ್ರಿ ನಿವಾಸ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿಸಿರುವುದರಿಂದ ಈ ದೇವಾಲಯಗಳಿಗೆ ಬರುವ ಭಕ್ತಾದಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ.
ದೇವಾಲಯಗಳ ಅಂಗಳದಲ್ಲಿ ಯಾತ್ರಿ ನಿವಾಸ ನಿರ್ಮಿಸುವುದರಿಂದ ಮದುವೆ,ಜಾತ್ರೆ ಮೊದಲಾದ ಧಾರ್ಮಿಕ, ಸಾಂಸ್ಕೃತಿಕ, ಚಟುವಟಿಕೆಗಳಿಗೆ ನೆರವು ದೊರೆಯಲಿದ್ದು. ಭಕ್ತರಿಗೆ ಅನುಕೂಲವಾಗಲಿದೆ. ಸಚಿವರು ತಾಲೂಕಿನ ದೇವಾಲಗಳ ಅಭಿವೃದ್ಧಿಗೆ ತೋರುತ್ತಿರುವ ಆಸಕ್ತಿ ಮತ್ತು ಕಾಳಜಿಯ ಬಗ್ಗೆ ಭಕ್ತರಲ್ಲಿ ಪ್ರಶಂಸೆ ವ್ಯಕ್ತವಾಗಿದೆ.