
ರಾಮನಗರ: ಕಾಂಗ್ರೆಸ್ನವರ ಪಾಪದ ಕೊಡ ತುಂಬಿದೆ. ಮೂಲ, ವಲಸಿಗರ ಫೈಟ್ ಪ್ರಾರಂಭ ಆಗಿದೆ. ಇದು ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ಫುಡ್ ಕಿಟ್ ವಿತರಣೆ ಮಾಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ದಲಿತ ಸಿಎಂ ಕೂಗು ವಿಚಾರವಾಗಿ ಮಾತನಾಡಿದ ಎಚ್ಡಿಕೆ, ನಾನು 2008ರಲ್ಲೇ ಖರ್ಗೆಯವರನ್ನು ಮಾಡಿ ಎಂದಿದ್ದೆ. ಅವತ್ತು ಸಹ ಬಿಜೆಪಿಗೆ ಪೂರ್ಣ ಬೆಂಬಲ ಇರಲಿಲ್ಲ. ಅವತ್ತು ಕಾಂಗ್ರೆಸ್ನವರು ಖರ್ಗೆಯವರನ್ನ ಮಾಡಲಿಲ್ಲ ಎಂದರು.
ಅವತ್ತು ಸಹ 5 ಜನ ರೆಬೆಲ್ ಶಾಸಕರನ್ನ ಬಿಜೆಪಿಗೆ ಕಳುಹಿಸಿದ್ದರು. 2013ರಲ್ಲಿ ಆದದ್ದು ಎಲ್ಲರಿಗೂ ಗೊತ್ತಿದೆ. ಹಾಗಾಗಿ ಜೆಡಿಎಸ್ ಪಕ್ಷವನ್ನ ಮುಗಿಸಬೇಕೆಂದು ಹೋದ ಕಾಂಗ್ರೆಸ್ ನಾಯಕರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ. ಜೆಡಿಎಸ್ ಪಕ್ಷಕ್ಕೆ ಬೆನ್ನಿಗೆ ಚೂರಿ ಹಾಕಿ ಹೋದವರಿಗೆ ಜನರೇ ಪಾಠ ಕಲಿಸುತ್ತಾರೆ. ಆ ಕಾಲವೂ ಸಹ ದೂರವಿಲ್ಲ ಎಂದರು.