ಮುಸುಕಿನ ಜೋಳ ಬೆಳೆದು ಬಸವಳಿದ ರಾಮನಗರ ರೈತರು

ರಾಜೇಶ್ ಕೊಂಡಾಪುರ
ರಾಮನಗರ: ಜಿಲ್ಲೆಯ ರೈತರ ಪಾಲಿಗೆ ರೇಷ್ಮೆ, ಹೈನುಗಾರಿಕೆ ಬಿಟ್ಟರೆ ರೂತರ ಸೈಡ್ ಖರ್ಚು ನಿಭಾಯಿಸುವ ಜತೆಗೆ ಬೆಳೆ ನಷ್ಟವನ್ನು ಬ್ಯಾಲೆನ್ಸ್ ಮಾಡುತ್ತಿದ್ದ ಮುಸುಕಿನ ಜೋಳ ಬೆಳೆ ಕೋವಿಡ್ ಲಾಕ್‌ಡೌನ್ ನಿಂದ ನೆಲಕಚ್ಚಿದ್ದು, ಬಳಕೆ ಪ್ರಮಾಣ ಕಡಿಮೆಯಾಗಿದ್ದರಿಂದ ಬೇಡಿಕೆಯೂ ಕುಸಿದಿದೆ.
ಗೋಬಿ ಮಂಚೂರಿ ಸೇರಿದಂತೆ ಆಹಾರ ಪ್ರಿಯರ ಬಾಯಿ ರುಚಿ ಹೆಚ್ಚಿಸಲು ಬಳಕೆಯಾಗೆ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುತ್ತಿದ್ದ ಬೆಳೆ ಇದು. ಈಗ ಕೋವಿಡ್ ಸೋಂಕು ನಿಯಂತ್ರಣದ ಲಾಕ್‌ಡೌನ್ ನಿಂದಾಗಿ ಮಾರಾಟ ಮತ್ತು ಬಳಕೆಯಲ್ಲಿ ಭಾರಿ ಅವ್ಯವಸ್ಥೆ ಉಂಟಾಗಿದೆ. ಮಾರುಕಟ್ಟೆಯಲ್ಲಿ ಕೇಳುವವರಿಲ್ಲದೆ ಕಟಾವಿಗೆ ಬಂದ ಮಾಲು ಜಾನುವಾರುಗಳ ಬಾಯಿಗೆ ಆಹಾರವಾಗಿದೆ.
ರಾಮನಗರ, ಚನ್ನಪಟ್ಟಣ, ಕನಕಪುರ ಹಾಗೂ ಮಾಗಡಿ ತಾಲೂಕಿನ ಬಹುಪಾಲು ಗ್ರಾಮಗಳಲ್ಲಿ ರೈತರು ಆದಾಯ ತಂದು ಕೊಡುವುದರ ಜತೆಗೆ ರಾಸುಗಳಿಗೆ ಮೇವಿನ ಬರ ನೀಗಿಸುತ್ತಿದ್ದ ಬೇಬಿಕಾರ್ನ್ ಅನ್ನು ಈಗ ಕೇಳುವವರಿಲ್ಲದಂತಾಗಿದೆ.
ಸಾಮಾನ್ಯವಾಗಿ ಖಾಸಗಿ ಕಂಪನಿಗಳು ಹಾಗೂ ಮಧ್ಯವರ್ತಿಗಳೇ ಜಮೀನಿಗೆ ಬಂದು ಬೇಬಿ ಕಾರ್ನ್ ಖರೀದಿಸುತ್ತಾರೆ. ಆದರೆ, ಮಹಾಮಾರಿ ಕೊರೋನಾದಿಂದಾಗಿ ಬೇಬಿಕಾರ್ನ್ ಮಾರಾಟವಾಗದೆ ಬೆಳೆಗಾರರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ.
ಮುಸುಕಿನ ಜೋಳ ಬೆಳೆಯಲ್ಲಿನ ಎಳಸು ಮೋತೆಯನ್ನು ಬೇಬಿ ಕಾರ್ನ್ ಎಂದು ಕರೆಯಲಾಗುತ್ತದೆ. ಜೋಳ ಬಲಿಯುವ(ಗಟ್ಟಿಯಾಗುವ) ಮುನ್ನ ಎಳಸು ತೆನೆಯನ್ನೇ ಆರಿಸಿ ಮುರಿದು ಅದನ್ನು ತಿಂಡಿ ತಿನಿಸುಗಳಿಗೆ ಸರಬರಾಜು ಮಾಡಲಾಗುತ್ತದೆ. ಬೇಬಿ ಕಾರ್ನ್ ಬೆಳೆಯನ್ನು ಸಂಸ್ಕರಣೆ ಹಾಗೂ ಪ್ಯಾಂಕಿಗ್ ಮಾಡಿ ದೇಶ ವಿದೇಶಗಳ ಮಾರುಕಟ್ಟೆಗಳಿಗೂ ಪೂರೈಕೆ ಮಾಡುವ ಕಾರ್ಖಾನೆಗಳಿವೆ. ಕೆಲವು ಮದ್ಯವರ್ತಿಗಳು ರೈತರಿಂದ ಖರೀಧಿಸಿ ಪ್ಯಾಂಕಿಂಗ್ ಮಾಡಿ ಹೋಟೆಲ್‌ಗಳಿಗೆ ಮಾರಾಟ ಮಾಡುವ ವ್ಯವಸ್ಥೆಯೂ ಚಾಲ್ತಿಯಲ್ಲಿದೆ.
ಬೆಂಗಳೂರು, ಮೈಸೂರು ಹಾಗೂ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿದಂತೆ ವಿವಿಧ ಪ್ರಮುಖ ನಗರಗಳ ಪ್ರತಿಷ್ಠಿತ ಹೋಟೆಲ್‌ಗಳು ಮತ್ತು ಚಾಟ್ಸ್ ಸೆಂಟರ್‌ಗಳಿಗೆ ಬೇಬಿಕಾರ್ನ್ ಪೂರೈಕೆಯಾಗುತ್ತಿತ್ತು. ಕೊರೋನಾ ಲಾಕ್ ಡೌನ್ ನಿಂದಾಗಿ ಅವೆಲ್ಲವು ಬಂದ್ ಆದ ಕಾರಣ ಬೇಬಿಕಾರ್ನ್ ಮಾರಾಟ ಸ್ಥಗಿತವಾಯಿತು. ಈಗಲೂ ಲಾಕ್‌ಡೌನ್ ನಿಂದಾಗಿ ಹೋಟೆಲ್, ಚಾಟ್ಸ್ ಸೆಂಟರ್ ಗಳು ಓಪನ್ ಆಗಿಲ್ಲ. ಆದರೆ, ಕೊರೋನಾ ಭೀತಿಯಿಂದಾಗಿ ಜನರು ಮನೆಯಿಂದ ಹೊರಬರುತ್ತಿಲ್ಲ. ಹೀಗಾಗಿ ಬೇಬಿ ಕಾರ್ನ್ ಕೊಳ್ಳುವವರು ಮುಂದೆ ಬರುತ್ತಿಲ್ಲ. ಕಟಾವಿಗೆ ಖರ್ಚಾದ ಹಣವೂ ಸಿಗದ ಕಾರಣ ತೆನೆ ಸಹಿತ ರಾಸುಗಳ ಮೇವಿಗೆ ಬಳಕೆ ಮಾಡಲಾಗುತ್ತಿದೆ.
ಹೈನೋದ್ಯಮ ನಂಬಿರುವ ರೈತರಿಗೆ ಫಸಲು ಹಾಗೂ ಮೇವು ಎರಡರಲ್ಲಿಯೂ ಲಾಭವಿರುವುದರಿಂದ ಹಾಕಿದ ಬಂಡವಾಳಕ್ಕೆ ಮೋಸ ಆಗುವುದಿಲ್ಲವೆಂಬ ನಂಬಿಕೆಯಿಂದ ಮುಸುಕಿನ ಜೋಳ ಬೆಳೆಯನ್ನು ರೈತರು ಮುತುವರ್ಜಿವಹಿಸಿ ಬೆಳೆಯುತ್ತಾರೆ. 60 ರಿಂದ 70 ದಿನಗಳಲ್ಲಿ ಬೆಳೆ ಕಟಾವಿಗೆ ಬರುವುದು ಮಾತ್ರವಲ್ಲ, ಸ್ಥಳದಲ್ಲಿಯೇ ಬಂದು ಕೆಲ ಖಾಸಗಿ ಕಂಪನಿಗಳು ಬೇಬಿಕಾರ್ನ್ ಖರೀದಿಸುತ್ತಾರೆಂಬುದು ಮ್ಸೀತೊಂದು ಅನುಕೂಲ.
ರಾಮನಗರ ಜಿಲ್ಲೆಯಲ್ಲಿ 1500 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಈ ಬೆಳೆ ಬೆಳೆಯಲಾಗುತ್ತಿದೆ. ಬಹುತೇಕ ರೈತ ಕುಟುಂಬಗಳು ಹೈನುಗಾರಿಕೆ ಕಸುಬನ್ನು ಆಶ್ರಯಿಸಿಕೊಂಡಿದ್ದು, ರಾಸುಗಳ ಮೇವಿಗಾಗಿ ಮುಸುಕಿನ ಜೋಳ ಬೆಳೆಯನ್ನು ಅಧಿಕವಾಗಿ ಬೆಳೆಯುತ್ತಾರೆ. ಇಷ್ಟು ದಿನಗಳ ಕಾಲ ಬೇಬಿಕಾರ್ನ್ ಬೆಳೆಯಿಂದಾಗಿ ಉತ್ತಮ ಜೀವನ ಸಾಗಿಸುತ್ತಿದ್ದ ರೈತರು ಕೊರೋನಾ ಏಟಿಗೆ ತತ್ತರಿಸಿದ್ದು ಬೆಳೆ ನಷ್ಟ ಅನುಭವಿಸಿದ್ದಾರೆ. ರಾಜ್ಯ ಸರಕಾರ ನೆರವಿಗೆ ಧಾವಿಸಬೇಕು ಎಂದು ಬೆಳೆಗಾರರು ಒತ್ತಾಯಿಸಿದ್ದಾರೆ.
————————-
“ಮುಸುಕಿನ ಜೋಳ ಬೆಳೆಯಿಂದ ಎರಡು ರೀತಿಯ ಲಾಭವಿದೆ. ಕಟಾವ್ ನಂತರ ಉಳಿಯುವ ಕಡ್ಡಿ ರಾಸುಗಳಿಗೆ ಮೇವಾಗುತ್ತದೆ. ಇದು ಹೈನುಗಾರಿಕೆಗೆ ಸಹಕಾರಿಯಾಗಿದೆ. ಬಹುತೇಕ ರೈತ ಕುಟುಂಬಗಳಿಗೆ ಹೈನುಗಾರಿಕೆ ಕಸುಬು ಆಶ್ರಯವಾಗಿದೆ. ರಾಸುಗಳ ಮೇವು ಮತ್ತು ಕುಟುಂಬದ ನಿರ್ವಹಣೆಗಾಗಿ ಈ ಬೆಳೆಯನ್ನು ಅಧಿಕವಾಗಿ ಬೆಳೆಯಲಾಗುತ್ತಿದೆ. ಆದರೆ ಮಹಾಮಾರಿ ಕೊರೋನಾದಿಂದಾಗಿ ಬೇಬಿಕಾರ್ನ್ ಮಾರಾಟವಾಗದೆ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರಕಾರ ರೈತರ ನೆರವಿಗೆ ಧಾವಿಸಬೇಕು.”
-ಪಟೇಲ್ ರಮೇಶ್, ರೈತ