ಪಿಡಿಒ ಲಾಗಿನ್ ನಕಲು ಮಾಡಿ ನಿವೇಶನ ಹಂಚಿಕೆ; ಆರೋಪ

ರಾಮನಗರ: ಕನಕಪುರ ತಾಲೂಕಿನ ಕೊಟ್ಟಗಾಳು ಗ್ರಾಮ ಪಂಚಾಯಿತಿಯಲ್ಲಿ ಬೆಂಗಳೂರು ಮೂಲದ ಎ.ಬಿ.ಸಿಟಿ ಎಂಟರ್ ಪ್ರೈಸಸ್ ಮಾಲೀಕ ರೆಡ್ಡಿ ಎಂಬಾತ ಗ್ರಾಮಪಂಚಾಯತಿ ಗಮನಕ್ಕೆ ತಾರದೇ ಕಾನೂನುಗಳನ್ನು ಉಲ್ಲಂಘಿಸಿ ಪಿಡಿಒ ಲಾಗಿನ್ ನಕಲು ಮಾಡಿ ನಿವೇಶನಗಳನ್ನು ಹಂಚಲಾಗಿದೆ ಎಂದು ಆರ್.ಟಿ.ಐ. ಕಾರ್ಯಕರ್ತ ದೊಂಬರದೊಡ್ಡಿ ರವಿಕುಮಾರ್ ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.
ಕೊಟ್ಟಗಾಳು ಗ್ರಾ.ಪಂ. ಸರ್ವೆನಂ. 13 ರ ಕೃಷಿ ಜಮೀನಿನಲ್ಲಿ ಅಕ್ರಮ ನಿವೇಶನಗಳನ್ನು ಸೃಷ್ಟಿ ಮಾಡಲಾಗಿದೆ. ಸೈಬರ್ ತಂತ್ರಜ್ಞಾನದ ಮೂಲಕ ಒಂದು ನಿವೇಶನವನ್ನು ಮರ್ನಾಲ್ಕು ಮಂದಿಗೆ ಮಾರಾಟ ಮಾಡಿ ಅಕ್ರಮ ಖಾತೆಯನ್ನೂ ಸಹ ಮಾಡಲಾಗಿದೆ. ಈ ಪ್ರಕರಣ ಗ್ರಾ.ಪಂ. ಪಿಡಿಒ ರವರಿಗಾಗಲೀ, ಅಧ್ಯಕ್ಷರು, ಸದಸ್ಯರ ಗಮನಕ್ಕಾಗಲೀ ಬಂದಿಲ್ಲ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಾಯತಿ ಅಭಿವೃದ್ದಿ ಅಧಿಕಾರಿ ರಾಜೇಶ್ವರಿಯವರು ಇ.ಒ. ರವರಿಗೆ ಲಿಖಿತ ದೂರು ನೀಡಿದ್ದರೂ ಸಹ ಮೂರು ತಿಂಗಳಿನಿಂದ ಯಾವುದೇ ಕ್ರಮ ಜರುಗಿಸಿಲ್ಲ. ಈ ಪ್ರಕರಣದಲ್ಲಿ ಗೊಂದಲ ಹಾಗು ಅನುಮಾನ ಮೂಡುತ್ತಿದೆ. ಅಕ್ರಮ ವಾಸನೆಯೂ ಸಹ ಬರುತ್ತಿದೆ. ಈ ಕೂಡಲೇ ರಾಮನಗರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಪ್ರಕರಣದ ಬಗ್ಗೆ ಸಮಗ್ರ ತನಿಖೆ ಮಾಡಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಸೈಬರ್ನಲ್ಲಿ ಫೋರ್ಜರಿ ಕಾತೆಯನ್ನು ಮಾಡಿ ಪಿಡಿಒ ರವರ ಲಾಗಿನ್ಗೆ ಖಾತೆಗಳನ್ನು ಮಾಡಿರುವ ಬಗ್ಗೆ ಮಾಹಿತಿ ಪಡೆದು ಸೈಬರ್ ಕ್ರೈಂ ಆಕ್ಟ್ ಪ್ರಕಾರ, ಇದರಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ? ಹೇಗೆ ಮಾಡಿದ್ದಾರೆ ಎಂಬುದನ್ನು ಪತ್ತೆಹಚ್ಚಿ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ಕೊಟ್ಟಗಾಳು ಪಂಚಾಯತಿಯಲ್ಲಿ ಅಕ್ರಮ ಖಾತೆ ಬಗ್ಗೆ ಪಿಡಿಒ ರವರು ಲಿಖಿತ ದೂರು ನೀಡಿರುವುದು ನಿಜ. ಅದರಂತೆ ಉನ್ನತ ಅಧಿಕಾರಿಗಳ ಅನುಮತಿ ಪಡೆದು ಪುನಃ ನಾವು ಸೈಬರ್ ಕ್ರೈಂ ಆಕ್ಟ್ ಪ್ರಕಾರ ಅಕ್ರಮ ಎಸಗಿದವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲು ಅವರಿಗೇ ಸೂಚಿಸಲಾಗಿದೆ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಎಲ್. ಮಧು ಸ್ಪಷ್ಟಪಡಿಸಿದ್ದಾರೆ.