ಕೋಡಂಬಳ್ಳಿ ಗ್ರಾಮದಲ್ಲಿ ಬೀದಿನಾಯಿಗಳ ದಾಳಿ; ಆರು ಕುರಿಗಳ ಬಲಿ

ರಾಮನಗರ: ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದಿನೆದಿನೇ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇತ್ತೀಚಿಗೆ ಹತ್ತು ಕುರಿಗಳನ್ನು ಬಲಿ ಪಡೆದ ಗಾಯ ಮಾಸುವ ಮುನ್ನವೇ ಮೂರು ಗರ್ಭಿಣಿ ಕುರಿಗಳನ್ನು ಕೊಂದು ಹಾಕಿದ್ದು ಮೂರು ಕುರಿಗಳ ಸ್ಥಿತಿ ಚಿಂತಾಜನಕವಾಗಿದೆ.
ಗ್ರಾಮಸ್ಥರು ಕೋಡಂಬಳ್ಳಿ ಗ್ರಾಮ ಪಂಚಾಯತಿ ಮತ್ತು ಕೋಳಿ ಅಂಗಡಿಗಳ ಮಾಲೀಕರಿಗೆ ಹಿಡಿಶಾಪ ಹಾಕುತ್ತಿದ್ದು, ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಕೋಡಂಬಳ್ಳಿ ಗ್ರಾಮದ ಕೆರೆಯಲ್ಲಿ ಕುರಿ ಮೇಯಿಸುತ್ತಿದ್ದ ಸೊತ್ತೆಗೌಡ ಎಂಬುವರಿಗೆ ಸೇರಿದ ಆರು ಕುರಿಗಳನ್ನು ಹತ್ತಾರು ಬೀದಿನಾಯಿಗಳು ಓಡಾಡಿಸಿಕೊಂಡು ಕಚ್ಚಿವೆ. ಎಲ್ಲಾ ಆರು ಕುರಿಗಳಿಗೂ ಕತ್ತಿನ ಭಾಗದಲ್ಲಿ ಕಚ್ಚಿದ್ದು, ಮೂರು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದರೆ, ಮೂರು ಕುರಿಗಳ ಸ್ಥಿತಿ ಚಿಂತಾಜನಕವಾಗಿವೆ. ಆ ಮೂರು ಕುರಿಗಳು ಸಹ ಬದುಕುವುದು ಕಷ್ಟ ಎಂದು ಪಶು ವೈದ್ಯರು ದೃಢಪಡಿಸಿದ್ದಾರೆ.
ನಮ್ಮ ಜೀವನ ನಡೆಯುತ್ತಿರುವುದೇ ಕುರಿ ಸಾಕಾಣಿಕೆಯಿಂದ. ಇದಕ್ಕೆಲ್ಲಾ ಕಾರಣ ಕೋಳಿ ತ್ಯಾಜ್ಯ. ನನ್ನ ಕುರಿಗಳ ಸಾವಿಗೆ ಗ್ರಾಮ ಪಂಚಾಯತಿ ಮತ್ತು ಕೋಳಿ ಅಂಗಡಿಗಳ ಮಾಲೀಕರೇ ನೇರ ಹೊಣೆ. ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಿದರೆ ನಾಯಿಗಳು ಮಾಂಸದ ರುಚಿಗೆ ಬೀಳುವುದು ಕಡಿಮೆಯಾಗುತ್ತಿತ್ತು ಎಂದು ಕುರಿಗಾಹಿ ಸೊತ್ತೆಗೌಡ ದೂರಿದ್ದಾರೆ.
ಹೀಗೆ ನಿರಂತರವಾಗಿ ನಾಯಿಗಳ ದಾಳಿಯಿಂದ ಕುರಿಗಳು ಸಾಯುತ್ತಿದ್ದರೆ ಮುಂದೆ ರೈತರ ಜೀವನ ಹೇಗೆ ಸಾಗಿಸಬೇಕೆಂಬ ಪ್ರಶ್ನೆ ಕಾಡುತ್ತಿದೆ. ಈ ಕೂಡಲೇ ಗ್ರಾಮ ಪಂಚಾಯಿತಿ ಎಚ್ಚೆತ್ತುಕೊಳ್ಳದೆ ಹೋದರೆ ಮುಂದೆ ಭಾರಿ ತಲೆದಂಡ ತೆರಬೇಕಾಗುತ್ತದೆ ಎಂಬುದು ಸ್ಥಳೀಯರು ಎಚ್ಚರಿಸಿದ್ದಾರೆ.