ಜಿಲ್ಲಾ ಸುದ್ದಿರಾಜಕೀಯರಾಮನಗರ

ಕದನ ಕುತೂಹಲ | ಜಮೀರ್ ಸ್ಪರ್ಧೆ ಇಂಗಿತ; ಏನಾದೀತು ರಾಮನಗರ ರಾಜಕಾರಣ?

ರಾಜೇಶ್ ಕೊಂಡಾಪುರ

ರಾಮನಗರ: ಪ್ರತಿಪಕ್ಷಗಳ ನಡುವಿನ ತಿಕ್ಕಾಟ ವೈಕ್ತಿಕ ನೆಲೆಯಲ್ಲಿ ತೀವ್ರಗೊಳ್ಳುತ್ತಲೇ ಇದೆ. ದಿನಬೆಳಗಾದರೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಪರಸ್ಪರ ಬೈದಾಡಿಕೊಳ್ಳುವುದು ಒಂದೆಡೆಯಾದರೆ, ಒಂದು ಕಾಲದ ಎಚ್​ಡಿಕೆ ಆಪ್ತ ಜಮೀರ್ ಅಹ್ಮದ್ ಈಗ ಸಿದ್ದರಾಮಯ್ಯ ಆಪ್ತ ವಲಯದಿಂದ ಅಬ್ಬರಿಸುತ್ತಿರುವುದು ಇನ್ನೊಂದೆಡೆ ನಡೆದಿದೆ. ಜಮೀರ್ ಇನ್ನೂ ಹೆಜ್ಜೆ ಮುಂದೆ ಹೋಗಿ, ಕುಮಾರಸ್ವಾಮಿ ಹಿಡಿತದಲ್ಲಿರುವ ರಾಮನಗರ ಕ್ಷೇತ್ರದಿಂದಲೇ ಸ್ಪರ್ಧಿಸಲು ಬಯಸಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.

ರಾಮನಗರದಿಂದ ಜಮೀರ್ ಸ್ಪರ್ಧಿಸಿದರೆ ಏನಾದೀತು? ಈ ಪ್ರಶ್ನೆಯನ್ನು ಕೇಳಿಕೊಳ್ಳುತ್ತಿದ್ದರೆ ಹಲವು ಕುತೂಹಲಗಳು ತೆರೆದುಕೊಳ್ಳುತ್ತವೆ.

ರಾಮನಗರ ಕ್ಷೇತ್ರದ ಹಿನ್ನೆಲೆ:

ಅಂದು ರಾಮನಗರ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ದೇವೇಗೌಡರು, ೩೫ ವರ್ಷಗಳ ಹಿಂದೆ ಪ್ರಧಾನಿಯಾದ ಸಂದರ್ಭದಲ್ಲಿ ಅಂದರೆ ೧೯೯೬ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜನತಾ ದಳದಿಂದ ಸ್ಪರ್ಧಿಸಿದ್ದ ಖ್ಯಾತ ನಟ ಅಂಬರೀಶ್ ಕಾಂಗ್ರೆಸ್ ಅಭ್ಯರ್ಥಿ ಸಿ.ಎಂ. ಲಿಂಗಪ್ಪ ವಿರುದ್ಧ ಪರಾಭವಗೊಂಡರು.
೧೯೯೯ರಲ್ಲಿ ನಡೆದ ಚುನಾವಣೆಯಲ್ಲಿ ಪಾಂಚಜನ್ಯ ಮೊಳಗಿಸಿದ್ದ ಲಿಂಗಪ್ಪ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾದರು.

ಇಂಥ ಕ್ಷೇತ್ರದಲ್ಲಿ ಎಚ್.ಡಿ. ಕುಮಾರಸ್ವಾಮಿ ಪ್ರವೇಶ ಮಾಡಿ, ಶಾಸಕರಾಗಿ, ೨೦-೨೦ ಸರ್ಕಾರದಲ್ಲಿ ಸಿಎಂ ಗದ್ದುಗೆಗೂ ಏರಿದರು. ನಂತರ ಯಡಿಯೂರಪ್ಪಗೆ ಅಧಿಕಾರ ಬಿಟ್ಟುಕೊಡಲಿಲ್ಲ ಎನ್ನುವ ಅಪಖ್ಯಾತಿ ಅಂಟಿಸಿಕೊಂಡರು. ನಂತರ ಕುಮಾರಸ್ವಾಮಿ ಮತ್ತೇ ಈ ಕ್ಷೇತ್ರದಿಂದ ಶಾಸಕರಾದರೂ, ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾದ್ದರಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೆ. ರಾಜು ಜೆಡಿಎಸ್ ನಿಂದ ಆಯ್ಕೆಯಾದರು.

ಆದರೆ, ಒಂದು ಸಂಗತಿಯನ್ನು ಗಮನಿಸಲೇಬೇಕು. ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಾಗದಿದ್ದರೂ ಜೆಡಿಎಸ್ ಗೆಲುವಿ‌ನ ಅಂತರ ಕಡಿಮೆಯಾಗುತ್ತಿದೆ.

೨೦೧೮ರ ಚುನಾವಣೆಯಲ್ಲಿ ಕುಮಾರಸ್ವಾಮಿ ೯೨೬೨೬ ಮತಗಳನ್ನು ಪಡೆದರೆ ಇವರ ಪ್ರತಿಸ್ಪರ್ಧಿ ಜಿ.ಪಂ. ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಕಾಂಗ್ರೆಸ್ ನಿಂದ ಕಣಕ್ಕಿಳಿದು ೬೯೯೯೦ ಮತಗಳನ್ನು ಪಡೆದರು. ಕುಮಾರಸ್ವಾಮಿ ೨೨೬೩೬ ಮತಗಳಿಂದ ಆಯ್ಕೆಯಾದರು.

ರಾಮನಗರದ ಜತೆಗೆ ಚನ್ನಪಟ್ಟಣ ಕ್ಷೇತ್ರದಿಂದಲೂ ಆಯ್ಕೆಯಾಗಿದ್ದ ಕುಮಾರಸ್ವಾಮಿ ರಾಮನಗರ ಕ್ಷೇತ್ರದ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ನಂತರ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ೧೦೯೧೩೭ ಮತಗಳನ್ನು ಪಡೆದರೆ ಬಿಜೆಪಿಯಿಂದ ಸ್ಪರ್ಧಿಸಿ ಕಣದಿಂದ ನಿವೃತ್ತಿ ಘೋಷಿಸಿದ ಎಂಎಲ್ಸಿ ಸಿ.ಎಂ. ಲಿಂಗಪ್ಪ ಪುತ್ರ ಎಲ್. ಚಂದ್ರಶೇಖರ್ ೩೭೨೨೪ ಮತಗಳನ್ನು ಪಡೆದರು. ಆದರೆ, ಜೋಡಿ ಪಕ್ಷದಿಂದ ಸ್ಪರ್ಧಿಸಿದ್ದ ಅನಿತಾಗೆ ೨೦೧೮ರ ಚುನಾವಣೆಯಲ್ಲಿ ಜೆಡಿಎಸ್ ಪಡೆದ ಮತಕ್ಕಿಂತ ೧೬೫೧೧ ಮತಗಳಷ್ಟೇ ಹೆಚ್ಚು ಮತಗಳನ್ನು ಪಡೆಯಲು ಶಕ್ತರಾದರು. ಇದರಿಂದ ಜೆಡಿಎಸ್ ವರ್ಚಸ್ಸು ಪ್ರತಿ ಚುನಾವಣೆಯಲ್ಲಿ ಗೆಲುವಿನ ಅಂತರ ಕಡಿಮೆಯಾಗಿರುವುದು ಗಮನೀಯ.

ಜಮೀರ್ ಎಂಟ್ರಿಯಾದ್ರೆ?

ರಾಮನಗರದಲ್ಲಿ ಸುಮಾರು ೩೮ ಸಾವಿರದಷ್ಟು ಮುಸ್ಲಿಂ ಮತದಾರರಿದ್ದಾರೆ. ಪ್ರತಿ ಚುನಾವಣೆಯಲ್ಲಿ ಇವರೇ ನಿರ್ಣಾಯಕ.

೨೦೧೮ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಜಿ.ಪಂ. ಮಾಜಿ‌ ಅಧ್ಯಕ್ಷ ಇಕ್ಬಾಲ್ ಹುಸೇನ್ ಪ್ರಥಮ ಪ್ರಯತ್ನದಲ್ಲಿ ೬೯ ಸಾವಿರಕ್ಕೂ ಹೆಚ್ವು ಮತಗಳನ್ನು ಪಡೆದಿದ್ದು ಕಡಿಮೆ ಸಾಧನೆಯೇನಲ್ಲ. ಇದಕ್ಕೆ ಅಲ್ಪಸಂಖ್ಯಾತರ ಮತಗಳು‌ ಒಟ್ಟುಗೂಡಿದ್ದು ಕಾರಣ.

ಈಗ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಹೆಸರು ಕೇಳಿ ಬರುತ್ತಿದ್ದು, ರಾಮನಗರ-ಚನ್ನಪಟ್ಟಣದಲ್ಲಿ ಜಮೀರ್ ಅಹಮದ್ ಖಾನ್ ಅಲ್ಪಸಂಖ್ಯಾತ ಸಮುದಾಯದಲ್ಲಿ ತಮ್ಮ ಪ್ರಭಾವ ಹೆಚ್ಚು ಉಳಿಸಿಕೊಂಡಿದ್ದಾರೆ. ರಾಮನಗರದಲ್ಲಿ ಜಮೀರ್ ಅಹಮದ್ ಸ್ಪರ್ಧಿಸಿದರೆ ಪ್ರಬಲ ಪೈಪೊಟಿ ಖಚಿತ.

ಬಹುಸಂಖ್ಯಾತರಾದ ಒಕ್ಕಲಿಗರಿದ್ದರೂ ಈ ಸಮುದಾಯದ ಮತ ವಿಭಜನೆಗೊಂಡಲ್ಲಿ ಮತ್ತು ಲಿಂಗಾಯಿತ ಸಮುದಾಯ ಬಿಜೆಪಿಯನ್ನು ಬೆಂಬಲಿಸಿದ್ದಲ್ಲಿ ತುರುಸಿನ ಸ್ಪರ್ಧೆ ನಿಚ್ಚಳ. ಆದರೆ ಗೆಲುವು-ಸೋಲಿನ ಬಗ್ಗೆ ಊಹಿಸಲಾಗದು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅನಿತಾ ಬದಲಿಗೆ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಕುಮಾರಸ್ವಾಮಿ ಅಖಾಡ ಸಿದ್ದಗೊಳಿಸುತ್ತಿದ್ದಾರೆ. ಇದರಿಂದಾಗಿ ಕಣದ ಅಂತಿಮ ಕ್ಷಣ ಪ್ರಾಮುಖ್ಯವೆನಿಸಿದ್ದು ಜಮೀರ್ ಅಹಮದ್ ಇಲ್ಲಿಂದ ಕಣಕ್ಕಿಳಿತ್ತಾರೆಯೇ ಎನ್ನುವುದು ಕೌತಕಕ್ಕೆ ಕಾರಣವಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button