ಚನ್ನಪಟ್ಟಣದಲ್ಲಿ ಪುಂಡಾನೆ ಸೆರೆ

ರಾಮನಗರ: ಕಾವೇರಿ ವನ್ಯಜೀವಿ ಅರಣ್ಯದಿಂದ ನಾಡಿಗೆ ಬಂದು ಆತಂಕ ಮೂಡಿಸಿದ್ದ ಒಂಟಿ ಸಲಗವನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಗೊಂಡಿದ್ದಾರೆ.
ಮಂಡ್ಯ ಭಾಗದಲ್ಲಿ ಸಾಕಷ್ಟು ಉಪಟಳ ನೀಡಿ ಜನರ ನಿದ್ದೆಗೆಡಿಸಿದ್ದ 25 ವರ್ಷ ಪ್ರಾಯದ ಗಂಡಾನೆಯನ್ನು ಚನ್ನಪಟ್ಟಣ ತಾಲೂಕಿನ ಗುಡ್ಡೆ ಅವ್ವೇರಹಳ್ಳಿ ಗ್ರಾಮದ ಕೆರೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸಾಕಾನೆಗಳ ಸಹಾಯದಿಂದ ಸೆರೆಹಿಡಿದಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೂಳಗೆರೆ ಗ್ರಾಮದ ಸಮೀಪ ಕಾಣಿಸಿಕೊಂಡ ಈ ಪುಂಡಾನೆಯನ್ನು ಸೆರೆ ಹಿಡಿಯಲು ಮೈಸೂರು ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದರು. ಇದಕ್ಕಾಗಿ ದುಬಾರೆ ಆನೆ ಶಿಬಿರದಿಂದ ೪ ಪಳಗಿದ ಸಾಕಾನೆಗಳನ್ನು ಕರೆಸಲಾಗಿತ್ತು. ಆದರೆ, ಪುಂಡಾನೆ ಅಲ್ಲಿಂದ ತಪ್ಪಿಸಿಕೊಂಡು ಚನ್ನಪಟ್ಟಣದ ಸಮೀಪ ಕಾಣಿಸಿಕೊಳ್ಳುವ ಮೂಲಕ ಅರಣ್ಯಾಧಿಕಾರಿಗಳಲ್ಲಿ ಆತಂಕ ಮೂಡಿಸಿತ್ತು.
ಈ ಪುಂಡಾನೆ ಗುಡ್ಡೆಅವ್ವೇರಹಳ್ಳಿ ಗ್ರಾಮದ ಕೆರೆಯಲ್ಲಿ ಇರುವುದನ್ನು ಖಚಿತ ಪಡಿಸಿಕೊಂಡು ಕಾರ್ಯಾಚರಣೆ ಕೈಗೊಂಡ ಅರಣ್ಯ ಇಲಾಖೆ ಸಿಬ್ಬಂದಿ ಪಳಗಿದ ಆನೆಗಳ ಸಹಾಯದಿಂದ ಪುಂಡಾನೆಯನ್ನು ಬಂಧಿಸಿದ್ದಾರೆ. ವಶಕ್ಕೆ ಪಡೆದಿರುವ ಆನೆ ಆರೋಗ್ಯದಿಂದ ಕೂಡಿದ್ದು, ಇದನ್ನು ದುಬಾರೆ ಆನೆ ಶಿಬಿರಕ್ಕೆ ಕಳುಹಿಸಲಾಗಿದೆ.
ಕಾರ್ಯಾಚಣೆಯ ನೇತೃತ್ವವನ್ನು ಮೈಸೂರು ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರೆಲಾಲ್ ವಹಿಸಿದ್ದರು. ಮಂಡ್ಯ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ರಾಮನಗರ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜು, ಚನ್ನಪಟ್ಟಣ ವಲಯ ಅರಣ್ಯಾಧಿಕಾರಿ ದಿನೇಶ್ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.