ಜಿಲ್ಲಾ ಸುದ್ದಿವಿಶೇಷ

ಬಡವರಿಗೆ ದಿನಸಿ ಕಿಟ್; ಗಮನ ಸೆಳೆಯುತ್ತಿದೆ ಪೊಲೀಸರ ಮಾನವೀಯ ಕೆಲಸ

ವರದಿ: ರಾಜೇಶ್ ಕೊಂಡಾಪುರ

ರಾಮನಗರ: ಕರೋನಾ ಸಂಕಷ್ಟದ ನಡುವೆ ಪೊಲೀಸರಿಗೆ ಸಾಕಷ್ಟು ಕೆಲಸಗಳಿರುತ್ತವೆ. ಲಾಕ್ ಡೌನ್ ಚೆಕ್ ಪೋಸ್ಟ್ ಡ್ಯೂಟಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಇದರ ಜತೆಗೆ ಮಹಾ ಹೆಮ್ಮಾರಿ ಕರೋನಾದ ಭಯ. ಇಷ್ಟೆಲ್ಲದರ ನಡುವೆ ಬಡವರ ಕಷ್ಟಕ್ಕೆ ಪೊಲೀಸರು ನೆರವಾಗಿದ್ದಾರೆ. ಎರಡೊತ್ತಿನ ಊಟಕ್ಕೂ ಅನುಕೂಲವಿಲ್ಲದ ಗ್ರಾಮಗಳಲ್ಲಿರುವ ಕುಟುಂಬಕ್ಕೆ ದಿನಸಿ ಕಿಟ್ ವಿತರಣೆ. ಇಷ್ಟೆಲ್ಲಾ ಮಾಡುತ್ತಿರುವ ಪೊಲೀಸರ ಕಾರ್ಯ ಜನರ ಪ್ರೀತಿಗೆ ಪಾತ್ರವಾಗಿದೆ.

ರಾಮನಗರ ಜಿಲ್ಲೆ ಹಾರೋಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಮುರಳಿ ಅವರ ನೇತೃತ್ವದಲ್ಲಿ ಇಂಥದೊಂದು ಉತ್ತಮ ಕೆಲಸ ನಡೆಯುತ್ತಿದೆ. ಲಾಕ್ ಡೌನ್ ನಿಂದ ಬಡವರು ಸಾಕಷ್ಟು ಕಷ್ಟದಿಂದ ಬಳಲುತ್ತಿದ್ದಾರೆ. ಇದನ್ನು ಅರಿತ ಪೊಲೀಸರು ಬಡವರ ನೆರವಿಗೆ ಮುಂದಾಗಿದ್ದಾರೆ. ಪೊಲೀಸ್ ಠಾಣೆಯ ಮುಂಭಾಗದಲ್ಲೇ ಬಡವರಿಗೆ ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನದ ಊಟ ವಿತರಣೆ ಮಾಡುತ್ತಿದ್ದಾರೆ. ಊಟ ಹಾಗೂ ತಿಂಡಿಯನ್ನು ಕ್ಯಾಂಟೀನ್ ಒಂದಕ್ಕೆ ವಹಿಸಲಾಗಿದೆ. ಕ್ಯಾಂಟೀನ್ ನಿಂದ ಬಂದ ಊಟವನ್ನ ಠಾಣೆಯ ಮುಂಭಾಗದಲ್ಲೇ ಪಿಎಸ್ಐ ಮುರಳಿ ಹಾಗೂ ಅವರ ಸಿಬ್ಬಂದಿಯೇ ವಿತರಣೆ ಮಾಡುತ್ತಾರೆ. ಅಂದಹಾಗೆ, ಇವರು ಮಾಡುತ್ತಿರುವ ಉತ್ತಮ ಕೆಲಸಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಗಿರೀಶ್ ಶ್ಲಾಘನೆ ವ್ಯಕ್ತಪಡಿಸುತ್ತಾರೆ

ಪಿಎಸ್ಐ ಹಾಗೂ ಸಿಬ್ಬಂದಿ ತಮ್ಮ ಸ್ವಂತ ಹಣ ಬಳಸಿಕೊಂಡು ಪ್ರತಿನಿತ್ಯ 400-500 ಮಂದಿಗೆ, ಹಸಿದು ಬಂದವರಿಗೆ ಊಟ ಹಾಕುತ್ತಿದ್ದಾರೆ. ಇನ್ನು ದೂರದ ಗಡಿ ಭಾಗದಲ್ಲಿ ವಾಸ ಮಾಡುತ್ತಿರುವ ಬಡ ಕುಟುಂಬಗಳ ಕಷ್ಟಕ್ಕೆ ಮಿಡಿದ ಪಿಎಸ್ಐ ಮುರಳಿ ಯಾವುದೇ ಅನುಕೂಲ ಇಲ್ಲದ ಗ್ರಾಮಗಳನ್ನ ಗುರುತಿಸಿ ಅಲ್ಲಿನ ಕುಟುಂಬಗಳಿಗೆ ಅಕ್ಕಿ, ಎಣ್ಣೆ, ಬೆಳೆ ಕಿಟ್ ಮಾಡಿ ಬಡ ಕುಟುಂಬಗಳಿಗೆ ನೆರವಾಗಿದ್ದಾರೆ. ಅಷ್ಟೇ ಅಲ್ಲದೇ ಕೊರೋನಾ ಬಗ್ಗೆ ಹಳ್ಳಿ ಜನರಿಗೆ ಜಾಗೃತಿ ಮೂಡಿಸುವ ಮೂಲಕ ಕರೊನಾ ತಡೆಗಟ್ಟುವ ಕ್ರಮಗಳನ್ನು ಹೇಳಿಕೊಡುತ್ತಿದ್ದಾರೆ. ಇನ್ನು ಲಾಕ್ಡೌನ್ ಆದಗಿನಿಂದ ಶುರುವಾಗಿರುವ ಇವರ ಕಾರ್ಯಕ್ರಮ ಇನ್ನು ಕೂಡ ಮುಂದುವರೆದಿದೆ.

ಎಷ್ಟೇ ಕಷ್ಟ ಇದ್ದರೂ ಪೊಲೀಸರು ಎರಡೊತ್ತಿನ ಊಟ ಜೊತೆಗೆ ಬಡವರಿಗೆ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಪೊಲೀಸರು ಮಾಡುತ್ತಿರುವ ಕೆಲಸ ನಿಜಕ್ಕೂ ಶ್ಲಾಘನೀಯ.

Spread the love

Related Articles

Leave a Reply

Your email address will not be published. Required fields are marked *

Back to top button