ಇದು ಹೆಣದಲ್ಲಿ ಹಣ ಮಾಡುವ ಸರ್ಕಾರ; ವಿಧಾನ ಪರಿಷತ್ ಸದಸ್ಯ ಎಸ್ ರವಿ ಟೀಕೆ

ಬೆಡ್ ಬ್ಲಾಕಿಂಗ್ ನ್ನು ನಾನು ಕಂಡುಹಿಡಿದೆ ಎಂದು ದೊಡ್ಡದಾಗಿ ಪ್ರಚಾರ ಮಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಖಾಸಗಿ ಆಸ್ಪತ್ರೆಗಳಲ್ಲಿ 900ರಿಂದ 1500 ರೂಪಾಯಿಗೆ ಲಸಿಕೆ ಪಡೆಯುವಂತೆ ಜಾಲತಾಣಗಳಲ್ಲಿ ಪೇಸ್ ಬುಕ್ ನಲ್ಲಿ ಪೋಸ್ಟ್ ಗಳನ್ನು ಹಾಕಿ ಪ್ರಚಾರ ಮಾಡುತ್ತಿದ್ದಾರೆ. ಸರ್ಕಾರ ಉಚಿತವಾಗಿ ಕೊಡಬೇಕಾದ ಕೋವಿಡ್ ಲಸಿಕೆಗಳನ್ನು ಜನರಿಗೆ ಹಣ ಕೊಟ್ಟು ಕೊಳ್ಳುವಂತೆ ಜನರಿಗೆ ಬಿಜೆಪಿ ನಾಯಕರು ಉತ್ತೇಜನ ಕೊಡುತ್ತಿರುವುದು ನೋಡಿದರೆ ನಮಗೆ ಹಲವು ರೀತಿಯ ಅನುಮಾನ ಉಂಟಾಗುತ್ತಿದೆ ಎಂದು ಕಾಂಗ್ರೆಸ್ ನ ವಿಧಾನ ಪರಿಷತ್ ಸದಸ್ಯ ಎಸ್ ರವಿ ಆರೋಪಿಸಿದರು.
ಅವರು ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಛೇರಿಯಲ್ಲಿ ಕೊರೋನ ತಡೆಗಟ್ಟಲು ಅವಶ್ಯಕ ಸಾಮಾಗ್ರಿಗಳನ್ನು ಖರೀದಿಸಲು ತಮ್ಮ ಶಾಸಕರು ಅನುದಾನದಿಂದ 25 ಲಕ್ಷ ಅನುದಾನವನ್ನು ಬಳಸಿಕೊಳ್ಳುಲು ಜಿಲ್ಲಾಧಿಕಾರಿಗಳಿಗೆ ಅನುಮತಿ ಪತ್ರ ನೀಡಿ ಮಾತನಾಡಿದರು.
ಸರ್ಕಾರ ಜನರಿಗೆ ಲಸಿಕೆ ಕೊಡುವುದರಲ್ಲಿ ವಿಫಲವಾಗಿದೆ. ಲಸಿಗೆ ನೀಡಲು ಕಾಂಗ್ರೆಸ್ ನ ಎಲ್ಲ ಶಾಸಕರು ಸಂಸದರು ತಲಾ ಒಂದು ಕೋಟಿ ಅನುದಾನ ಕೊಡುತ್ತೇವೆ ಎಂದು ನಮ್ಮ ನಾಯಕರು ಹೇಳಿದಾಗ ಅದನ್ನು ಪಡೆದು ಜನರಿಗೆ ಲಸಿಕೆ ನೀಡಲು ಅವರು ಇದುವರೆಗೂ ಮನಸ್ಸು ಮಾಡಿಲ್ಲ, ಬಹುಶಃ ತಮ್ಮ ವೈಫಲ್ಯಕ್ಕೆ ನಾಚಿಕೆ ಪಟ್ಟು ನಮ್ಮೊಂದಿಗೆ ಸಹಕರಿಸಲು ಅವರಿಗೆ ಮುಜುಗರ ಇರಬಹುದು.
ಲಸಿಕೆ ಮೊದಲನೇಯ ಡೋಸ್ ನಂತರ 42 ದಿನಗಳಿಗೆ ಎರಡನೇ ಡೋಸ್ ಕೊಡಬೇಕು ಈಗ ಹಲವಾರು ಜನರಿಗೆ 65 ರಿಂದ 75 ದಿನಗಳಾಗಿದ್ದರು ಅವರಿಗೆ ಲಸಿಕೆಯ ಎರಡನೇ ಡೋಸ್ ಕೊಟ್ಟಿಲ್ಲ. ಅಲ್ಲದೆ ಸರ್ಕಾರ ಘೋಷಿಸಿರುವ ಪ್ಯಾಕೇಜ್ ಒಂದು ಭೋಗಸ್ ಪ್ಯಾಕೇಜ್ ಆಗಿದ್ದು ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಇದು ಹೆಣದಲ್ಲಿ ಹಣ ಮಾಡುವ ಸರ್ಕಾರ ಎಂದು ಪರಿಷತ್ ಸದಸ್ಯ ಎಸ್ ರವಿ ಕಟುವಾಗಿ ಟೀಕಿಸಿದರು