ಜಿಲ್ಲಾ ಸುದ್ದಿ

ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ವ್ಯಾಕ್ಸಿನ್‍ಗಾಗಿ ಮುಗಿಬಿದ್ದ ಜನರು; ನೂಕುನುಗ್ಗಲು ತಡೆಯಲು ಆಸ್ಪತ್ರೆ ಸಿಬ್ಬಂದಿ ಹರಸಾಹಸ

ಕಾರವಾರ : 45 ವರ್ಷ ಮೇಲ್ಪಟ್ಟವರಿಗೂ ಕೊರೋನಾ ತಡೆ ಲಸಿಕೆ ನೀಡಲಾಗುತ್ತದೆ ಎನ್ನುವ ಮಾಹಿತಿ ಪಡೆದ ಜನರು ಒಮ್ಮೆಲೇ ಆಸ್ಪತ್ರೆಯತ್ತ ದೌಡಾಯಿಸಿ ಬಂದ ಪರಿಣಾಮವಾಗಿ ಜನರ ನೂಕು ನುಗ್ಗಲು ಉಂಟಾಗಿ ಜನರನ್ನು ಚದುರಿಸಲು ಆಸ್ಪತ್ರೆ ಸಿಬ್ಬಂದಿ ಹರಸಾಹಸ ಪಟ್ಟ ಘಟನೆ ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಪೂರ್ವ ನಿಗಧಿಯಂತೆ ತಾಲೂಕಿನ ವಿವಿಧ ಸಹಕಾರಿ ಸಂಘಗಳ ನೌಕರರು, ಪಂಚಾಯತ ಸಿಬ್ಬಂದಿಗಳು ಲಸಿಕೆ ಪಡೆಯಲು ಆಸ್ಪತ್ರೆಗೆ ಆಗಮಿಸಿದ್ದರು.ಈ ನಡುವೆ 45 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳ ಕಛೇರಿಯಿಂದ ಭಟ್ಕಳ ತಾಲೂಕು ಆರೋಗ್ಯಾಧಿಕಾರಿಗಳಿಗೆ ಸಂದೇಶ ರವಾನೆಯಾಯಿತು.

ಈ ಮಾಹಿತಿಯನ್ನು ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಕೆಲವು ವ್ಯಕ್ತಿಗಳೊಂದಿಗೆ ಹಂಚಿಕೊಂಡಿದ್ದು,ಈ ಮೂಲಕ ಈ ಮಾಹಿತಿ ಕೆಲವೇ ನಿಮಿಷಗಳ ಅವಧಿಯಲ್ಲಿ ನೂರಾರು ಮಂದಿಯನ್ನು ತಲುಪಿತು.ಕೂಡಲೇ ನೂರಾರು ಜನರು ಆಸ್ಪತ್ರೆಯತ್ತ ಧಾವಿಸಿ ಬಂದ ಪರಿಣಾಮವಾಗಿ ಲಸಿಕೆ ವಿತರಣಾ ಕೇಂದ್ರ ಜನರಿಂದ ತುಂಬಿ ತುಳುಕಾಡಿತು.ಈ ನಡುವೆ ಬೆಳಿಗ್ಗೆಯಿಂದ ಲಸಿಕೆಗಾಗಿ ಸರತಿ ಸಾಲಿನಲ್ಲಿ ನಿಂತವರು ಗೊಂದಲಕ್ಕೆ ಒಳಗಾಗಿ,ಸ್ಥಳದಲ್ಲಿ ಗದ್ದಲ ನಿರ್ಮಾಣವಾಯಿತು.

ಸಿಪಿಐ ದಿವಾಕರ ಸಿಬ್ಬಂದಿಗಳೊಡನೆ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದರು. ನಂತರ ಸ್ಥಳಕ್ಕೆ ಆಗಮಿಸಿದ ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್, ಸರತಿ ಸಾಲಿನಲ್ಲಿ ನಿಂತವರ ಹೆಸರನ್ನು ನೊಂದಾಯಿಸಿಕೊಂಡು ಲಸಿಕೆ ಪಡೆಯಲು ಮೊದಲ ಪ್ರಾಶಸ್ತ್ಯ ನೀಡುವುದಾಗಿ ಜನರನ್ನು ಸಮಾಧಾನಪಡಿಸಿದರು. ನಂತರ ಹಲವರು ಗೊಣಗುತ್ತಲೇ ಅಲ್ಲಿಂದ ತೆರಳಿದ ಕಾರಣ ಪರಿಸ್ಥಿತಿ ಶಾಂತವಾಯಿತು.

ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಸದ್ಯ 250 ರಿಂದ 300 ಜನರಿಗೆ ಯಾವುದೇ ನೂಕು ನುಗ್ಗಲಿಗೆ ಅವಕಾಶ ನೀಡದಂತೆ ಲಸಿಕೆ ನೀಡಲು ಸಾಧ್ಯ ಇದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಲಸಿಕೆ ಸಿಗಲಿದ್ದು,ಯಾರೂ ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಭಟ್ಕಳ ಮುಖ್ಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಸ್ಪಷ್ಟಪಡಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button