ಅಂಕೋಲಾ: ಕೋವಿಡ್ ಲಸಿಕೆ ಪಡೆದ ವೃದ್ಧ 35 ನಿಮಿಷದಲ್ಲೇ ಸಾವು

ಕಾರವಾರ: ಕೋವಿಡ್ ಲಸಿಕೆ ಪಡೆದ ವೃದ್ಧನೋರ್ವ 35 ನಿಮಿಷಗಳ ನಂತರ ಮೃತಪಟ್ಟ ಘಟನೆ ಅಂಕೋಲಾ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.
ಮೃತಪಟ್ಟಿರುವುದು ಕೋವಿಡ್ ಲಸಿಕೆಯಿಂದಲೋ ಅಥವಾ ಇನ್ನಿತರ ಕಾರಣದಿಂದಲೋ ಎಂದು ತಿಳಿಯಲಾಗದೇ ಕುಟುಂಬದವರು ಸಾವಿಗೆ ಕಾರಣ ನೀಡುವಂತೆ ಒತ್ತಾಯಿಸಿದರು.
ನಡೆದದ್ದೇನು?
ಅಕೋಲಾ ತಾಲೂಕಿನ ಪುರಸಭೆ ವ್ಯಾಪ್ತಿಯ ಕಂತ್ರಿಯ ನಿವಾಸಿ ಮಹಾದೇವ ಪುತ್ತು ನಾಯ್ಕ (67) ಕೋವಿಡ್ ಲಸಿಕೆಯನ್ನು ಪಡೆಯಲು 3 ಕಿ.ಮೀ.ಅಂತರದಲ್ಲಿರುವ ಕಂತ್ರಿಯಿಂದ ಕಾಲ್ನಡಿಗೆಯಲ್ಲಿಯೇ ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ನೀಡುತ್ತಿರುವ ಲಸಿಕೆ ಕೇಂದ್ರಕ್ಕೆ ಸತಿ-ಪತಿಗಳೀರ್ವರು ಲಸಿಕೆ ಪಡೆಯಲು ಮುಂಜಾನೆ 9 ಗಂಟೆಗೆ ಬಂದು 11 – 10 ಘಂಟೆಗೆ ಲಸಿಕೆಯನ್ನು ಇತರೆ 9 ಜನರ ಜೊತೆಗೆ ಪಡೆದಿದ್ದರು.
ಲಸಿಕೆ ಪಡೆದ ಮೇಲೆ ಅರ್ಧ ಗಂಟೆ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿಯೇ ವಿಶ್ರಾಂತಿ ತೆಗೆದುಕೊಂಡಿದ್ದಾರೆ.ಈ ಲಸಿಕೆಯನ್ನು ತೆಗೆದುಕೊಂಡ ಮೇಲೆ ಮುಂಜಾಗೃತಾ ಕ್ರಮವಾಗಿ ಜ್ವರ ಬಂದರೆ ಮಾತ್ರೆ ತೆಗೆದುಕೊಳ್ಳಲು ತಾಲೂಕಾಸ್ಪತ್ರೆಗೆ ಸತಿ -ಪತಿಗಳೀರ್ವರು ಹೋದಾಗ ತಾಲೂಕಾಸ್ಪತ್ರೆಯಲ್ಲಿ ಕುಳಿತಲ್ಲಿಯೇ ತಲೆ ಸುತ್ತಿದಂತಾಗಿ ವೃದ್ಧ ನೆಲಕ್ಕೆ ಬಿದ್ದರು.ಕೂಡಲೇ ತಾಲೂಕಾಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದಾಗ ಮಾದೇವ ಪುತ್ತು ನಾಯ್ಕ ಮೃತಪಟ್ಟಿದ್ದರು.
ಇದರಿಂದಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು.ಕೂಡಲೇ ಪೊಲೀಸರು ಆಸ್ಪತ್ರೆಗೆ ಆಗಮಿಸಿ ವಿಶೇಷ ಭದ್ರತೆ ಒದಗಿಸಿದರು.ಕುಟುಂಬದವರು ಯಾಕಾಗಿ ಮೃತಪಟ್ಟಿದ್ದಾರೆ ಎಂದು ವೈದ್ಯರನ್ನು ವಿಚಾರಿಸಿದಾಗ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಟಿಎಚ್ಓ ನೀತೀನ್ ಹೊಸ್ಮೇಲಕರ್ ಮಾತನಾಡಿ, ನಿಮಗೆ ಲಸಿಕೆಯಿಂದಲೇ ಮೃತ ಪಟ್ಟಿರುವ ಬಗ್ಗೆ ಅನುಮಾನವಿದ್ದರೆ ಲಿಖಿತವಾಗಿ ತಿಳಿಸಿದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುವುದು.ಒಂದಾನುವೇಳೆ ನಿಮಗೆ ಅಂಕೋಲಾ ವೈದ್ಯರ ಮೇಲೆ ಸಂಶಯವಿದ್ದಲ್ಲಿ ಕಾರವಾರದ ವೈಧ್ಯಕೀಯ ಕಾಲೇಜಿಗೆ ಮರಣೋತ್ತರ ಪರೀಕ್ಷೆ ನಡೆಸಲು ಕಳುಹಿಲಾಗುವುದು. ಇಸಿಜಿ ಪರೀಕ್ಷೆಯಲ್ಲಿ ಹೃದಯಾಘಾತದಿಂದಲೇ ಮೃತಪಟ್ಟಿರುವುದು ದೃಡವಾಗಿದೆ ಎಂದು ಸಮರ್ಥಿಸಿಕೊಂಡರು.
ಸಿಪಿಐ ಕೃಷ್ಣಾನಂದ ನಾಯಕ ಮಾತನಾಡಿ,ನಿಮಗೆ ಯಾವುದೇ ಗೊಂದಲವಿದ್ದಲ್ಲಿ ಪೊಲೀಸರಿಗೆ ದೂರು ನೀಡಬಹುದು ಎಂದು ತಿಳಿಸಿದರು.
ನಂತರ ಕುಟುಂಬಸ್ಥರು ಪಂಚರ ಹೇಳಿಕೆಯನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಿ ಶವವನ್ನು ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋದರು.ತಾಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಹೇಂದ್ರ ನಾಯಕ,ಡಾ.ಸಂತೋಷ,ಡಾ. ನರೇಂದ್ರ, ಡಾ.ರಮೇಶ, ಪಿ.ಎಸ್.ಐ. ಪ್ರೇಮನಗೌಡ ಪಾಟೀಲ್,ಪ್ರೊಬೇಶನರಿ ಪಿ.ಎಸ್.ಐ.ಮಲ್ಲಿಕಾರ್ಜುನಯ್ಯ ಉಪಸ್ಥಿತರಿದ್ದರು.