ಉತ್ತರ ಕನ್ನಡಕಲೆ

ಜೇಡಿಮಣ್ಣಿನ ಜೇನು ಪೆಟ್ಟಿಗೆ: ಕುಲಕಸುಬಿಗೆ ಹೊಸ ಆಯಾಮ ಕೊಡುತ್ತಿರುವ ಅಂಕೋಲೆಯ ವಾಸುದೇವ ಗುನಗಾ

——-ತೇಜಸ್ವಿ ಬಿ ನಾಯ್ಕ——-

ಒಂದು ಕಾಲದಲ್ಲಿ ಪಾತ್ರೆ,ಪಗಡೆಗಳು,ನೀರು ತುಂಬುವ ಗಡಿಗೆಗಳು ಮಣ್ಣಿನಿಂದಲೇ ತಯಾರಾಗುತ್ತಿದ್ದವು.ಕಾಲ ಬದಲಾದಂತೆಲ್ಲಾ ಮಣ್ಣಿನ ಪಾತ್ರೆಗಳು ಮರೆಯಾಗಿ ಆ ಜಾಗದಲ್ಲಿ ಪ್ಲಾಸ್ಟಿಕ್ ಮತ್ತು ಸ್ಟೀಲ್ ಪಾತ್ರೆಗಳು ಆಕ್ರಮಿಸಿಕೊಂಡಿವೆ. ಇಂತಹ ಸಂದಿಗ್ಧತೆಯ ನಡುವೆಯೂ ಅಂಕೋಲೆಯ ಕುಂಬಾರಕೇರಿಯ ಪದವೀಧರ ಯುವಕ ವಾಸುದೇವ ಗುನಗಾ ತಮ್ಮ ಕುಲ ಕಸುಬಾದ ಕುಂಬಾರಿಕೆಯನ್ನು 22 ವರ್ಷದಿಂದ ಶೃದ್ಧೆಯಿಂದ ನಡೆಸಿಕೊಂಡು ಬಂದಿದ್ದಾರೆ.

ತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರ ಪ್ರದೇಶವಾದ ಕಾರವಾರ, ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ಈ ನಾಲ್ಕು ತಾಲೂಕುಗಳಲ್ಲಿ 400ರಷ್ಟು ಕುಂಬಾರರ ಕುಟುಂಬಗಳಿವೆ. ಈ ಪೈಕಿ ಐದು ಕುಟುಂಬಗಳು ಮಾತ್ರ ಕುಂಬಾರಿಕೆಯನ್ನು ನಡೆಸುತ್ತಿವೆ. ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಕುಂಬಾರರ ಕುಲ ಕಸುಬಾದ ಮಣ್ಣಿನ ಉತ್ಪನ್ನಗಳ ತಯಾರಿಕೆ ಇಂದಿನ ಯುವ ಪೀಳಿಗೆಗೆ ಕಾಣಸಿಗುವುದು ದುರ್ಲಭವಾಗಿದೆ.

ಒಂದು ಕಾಲದಲ್ಲಿ ಪಾತ್ರೆ,ಪಗಡೆಗಳು,ನೀರು ತುಂಬುವ ಗಡಿಗೆಗಳು ಮಣ್ಣಿನಿಂದಲೇ ತಯಾರಾಗುತ್ತಿದ್ದವು. ಕಾಲ ಬದಲಾದಂತೆಲ್ಲಾ ಮಣ್ಣಿನ ಪಾತ್ರೆಗಳು ಮರೆಯಾಗಿ ಆ ಜಾಗದಲ್ಲಿ ಪ್ಲಾಸ್ಟಿಕ್ ಮತ್ತು ಸ್ಟೀಲ್ ಪಾತ್ರೆಗಳು ಆಕ್ರಮಿಸಿಕೊಂಡಿವೆ. ಇಂತಹ ಸಂದಿಗ್ಧತೆಯ ನಡುವೆಯೂ ಅಂಕೋಲೆಯ ಕುಂಬಾರಕೇರಿಯ ಪದವೀಧರ ಯುವಕ ವಾಸುದೇವ ಗುನಗಾ ತಮ್ಮ ಕುಲ ಕಸುಬಾದ ಕುಂಬಾರಿಕೆಯನ್ನು 22 ವರ್ಷದಿಂದ ಶೃದ್ಧೆಯಿಂದ ನಡೆಸಿಕೊಂಡು ಬಂದಿದ್ದಾರೆ.

ವಾಸುದೇವ ಗುನಗಾ ವಿಶೇಷವಾಗಿ ಜೇಡಿಮಣ್ಣಿನಿಂದ ಒಲೆಗಳನ್ನು ತಯಾರಿಸುತ್ತಾರೆ. ಇದಕ್ಕೆ ಗೋವಾ ರಾಜ್ಯದಲ್ಲಿ ಬಹಳ ಬೇಡಿಕೆ ಇದೆ. ಅಲ್ಲಿನ ಕ್ರೈಸ್ತರು ಜೇಡಿಮಣ್ಣಿನಿಂದ ತಯಾರಿಸಿದ ವಸ್ತುಗಳನ್ನು ವಿಶೇಷವಾಗಿ ಪ್ರೀತಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ಮಣ್ಣಿನಿಂದ ತಯಾರಿಸಿದ ವಸ್ತುಗಳನ್ನು ಅಲ್ಲಿ ಉಡುಗೊರೆಯಾಗಿ ನೀಡುವ ಸಂಪ್ರದಾಯವಿದೆ. ಹೀಗಾಗಿ ಗೋವಾ ರಾಜ್ಯದಲ್ಲಿ ಮಣ್ಣಿನ ಉತ್ಪನ್ನಗಳಿಗೆ ಇದ್ದಷ್ಟು ಬೇಡಿಕೆ ಇನ್ನೆಲ್ಲಿಯೂ ಇಲ್ಲವೆನ್ನುತ್ತಾರೆ ವಾಸುದೇವ ಗುನಗಾ.

ಸರಕಾರ ರಾಜ್ಯದಲ್ಲಿ ಅನಿಲ ಭಾಗ್ಯ ಯೋಜನೆ ಜಾರಿಗೆ ತಂದಂದಿನಿಂದ ಮಣ್ಣಿನ ಒಲೆಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದೆ. ಈ ನಡುವೆ ಅರಣ್ಯ ಪ್ರದೇಶದಲ್ಲಿ ಮಾತ್ರ ಸಿಗುವ ಜೇಡಿಮಣ್ಣನ್ನು ಬೇಕಾಬಿಟ್ಟಿ ತರಲು ಅವಕಾಶವಿಲ್ಲ. ಮಣ್ಣಿನ ಉತ್ಪನ್ನಗಳನ್ನು ತಯಾರಿಸಿದ ಮೇಲೆ ಅದನ್ನು ಭಟ್ಟಿಯಲ್ಲಿ ಸುಡಬೇಕಾಗುತ್ತದೆ. ನೂರು ಒಲೆಗಳನ್ನು ಸುಡಬೇಕಾದರೆ ಅದಕ್ಕೆ 15 ಕ್ವಿಂಟಾಲ್ ಕಟ್ಟಿಗೆ ಬೇಕು. ಒಂದು ಕ್ವಿಂಟಾಲ್ ಕಟ್ಟಿಗೆಗೆ 600 ರೂಪಾಯಿ ಅರಣ್ಯ ಇಲಾಖೆ ನಿಗದಿಪಡಿಸಿದೆ. ಅಬ್ಬಬ್ಬಾ ಅಂದರೆ ಒಂದು ಒಲೆ ಮಾರುಕಟ್ಟೆಯಲ್ಲಿ 80 ರೂ. ನಿಂದ 100 ರೂ. ಗೆ ಮಾರಾಟವಾಗುತ್ತದೆ.

ನೀರು ತುಂಬುವ ಮಡಿಕೆ ಮತ್ತು ಒಲೆಯನ್ನು ವಾಸುದೇವ ತಯಾರಿಸಿದರೆ ದೂಪದ ತಟ್ಟೆಯನ್ನು ಅವರ ಪತ್ನಿ ತಯಾರಿಸುತ್ತಾರೆ. ಮಳೆಗಾಲದಲ್ಲಿಯೂ ಇವರಿಗೆ ಕೈತುಂಬಾ ಕೆಲಸ. ಮಣ್ಣಿನ ಮಡಿಕೆ, ಒಲೆ, ಜೇನು ಪೆಟ್ಟಿಗೆಯನ್ನು ಈಗಲೇ ಸಂಗ್ರಹಿಸಿಟ್ಟುಕೊಂಡರೆ ಬೇಸಿಗೆಯಲ್ಲಿ ನಡೆಯುವ ಜಾತ್ರಾ ದಿನಗಳಲ್ಲಿ ಭರ್ಜರಿ ವ್ಯಾಪಾರ ನಡೆಸಿ ಅಧಿಕ ಲಾಭ ಪಡೆಯಬಹುದು. ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಮಣ್ಣಿನ ಉತ್ಪನ್ನಗಳಿಗೆ ಬಾರೀ ಬೇಡಿಕೆ ಇದೆ.

ಸರ್ಕಾರ ಬಿದಿರಿನ ಕೆಲಸ ಮಾಡುವ ಮೇದಾರರಿಗೆ, ಕಟ್ಟಿಗೆ ಕೆಲಸ ಮಾಡುವ ಬಡಿಗರಿಗೆ, ಶಿಲ್ಪಿ ಕೆಲಸ ಮಾಡುವ ಗುಡಿಗಾರರಿಗೆ ಸಹಾಯಧನ ನೀಡುವಂತೆ ಕುಂಬಾರರಿಗೂ ಸಹಾಯಧನ ನೀಡಿದರೆ ಮಾತ್ರ ಈ ಕಸುಬು ಉಳಿಯಲು ಸಾಧ್ಯ. ಒಣ ಕಟ್ಟಿಗೆಯನ್ನು ಸರಕಾರ ಕಡಿಮೆ ದರದಲ್ಲಿ ಕುಂಬಾರರಿಗೆ ಪೂರೈಸಬೇಕು. ಕುಂಬಾರರು ತಮ್ಮಲ್ಲಿರುವ ಕೀಳರಿಮೆಯನ್ನು ಬಿಟ್ಟು ಆಧುನಿಕ ಮಾರುಕಟ್ಟೆಯತ್ತ ಒಲವು ತೋರಿ ಅಲಂಕಾರಿಕ ವಸ್ತುಗಳನ್ನು ತಯಾರಿಸಲು ಹೆಚ್ಚು ಒಲವು ತೋರಬೇಕು ಎನ್ನುತ್ತಾರೆ ವಾಸುದೇವ ಗುನಗಾ.

ವಾಸುದೇವ ಅವರು ಮಣ್ಣಿನಿಂದ ಜೇನು ಪೆಟ್ಟಿಗೆ ತಯಾರಿಸುತ್ತಾರೆ. ರಾಜ್ಯದ ಹಲವು ಜಿಲ್ಲೆಗಳಿಂದ ಇದಕ್ಕೆ ಬಹಳ ಬೇಡಿಕೆ ಬಂದಿದೆ. ಕರಾವಳಿಯಲ್ಲಿ ಬೇಸಿಗೆಯ ತಾಪಮಾನ ಹೆಚ್ಚಿರುವುದರಿಂದ ಸಾಮಾನ್ಯವಾಗಿ ಕಟ್ಟಿಗೆಯಲ್ಲಿ ತಯಾರಿಸಿದ ಜೇನು ಪೆಟ್ಟಿಗೆಗಳಲ್ಲಿ ಜೇನು ಇಳುವರಿ ಕಡಿಮೆಯಾಗಿರುತ್ತದೆ ಮತ್ತು ಜೇನು ಹುಳುಗಳು ನಾಶಗೊಳ್ಳುವ ಸಂಭವವಿರುತ್ತದೆ. ಆದರೆ ಮಣ್ಣಿನ ಜೇನುಪೆಟ್ಟಿಗೆ ತಂಪಾಗಿರುವ ಕಾರಣಕ್ಕೆ ಜೇನು ಇಳುವರಿಯೂ ಕೂಡಾ ಹೆಚ್ಚಾಗಿರುತ್ತದೆ. ಅದರೊಂದಿಗೆ ಜೇನು ಸಂತತಿಯು ವೃದ್ಧಿಯಾಗಲು ಸಹಕಾರಿಯಾಗುತ್ತದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯವು ವಾಸುದೇವ ಗುನಗಾ ಅವರಿಗೆ 2016ನೇ ಸಾಲಿನಲ್ಲಿ “ಕೃಷಿ ಆವಿಷ್ಕಾರ” ಪ್ರಶಸ್ತಿ ನೀಡಿ ಗೌರವಿಸಿದೆ.

ಆಧುನಿಕ ತಂತ್ರಜ್ಞಾನದ ನಡುವೆ ಮರೆಯಾಗುತ್ತಿರುವ ಕುಂಬಾರರ ಕುಲ ಕಸುಬಿಗೆ ಸರಕಾರ ಪ್ರೋತ್ಸಾಹ ನೀಡಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button