ಉತ್ತರ ಕನ್ನಡ

ಚಾಕ್​ಪೀಸ್‌ ಆರ್ಟ್; ಕಲಾವಿದನಿಗೆ ಗ್ರಾಮಸ್ಥರಿಂದ ಸನ್ಮಾನ

ಕಾರವಾರ : ಚಾಕ್‌ ಪೀಸ್‌ ಆರ್ಟ್ ಮೂಲಕ ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್ಸ್ ನಲ್ಲಿ ದಾಖಲಾದ ಹೊನ್ನಾವರ ತಾಲೂಕಿನ ಗೇರುಸೊಪ್ಪಾದ ಯುವಕನಿಗೆ ಆತನ ಊರಿನ ಗ್ರಾಮ ಪಂಚಾಯತ್ ಅಧಿಕಾರಿ, ಆಡಳಿತ ವರ್ಗ ಸನ್ಮಾನಿಸಿ ಪುರಸ್ಕರಿಸುವ ಮೂಲಕ ಗ್ರಾಮೀಣ ಪ್ರತಿಭೆಗೆ ಪ್ರೋತ್ಸಾಹ ನೀಡಿ ಹುರಿದುಂಬಿಸಿದ್ದಾರೆ.

ತಾಲೂಕಿನ ಗೇರುಸೊಪ್ಪಾ ಬಸಾಕುಳಿಯ ಪ್ರದೀಪ್‌ ಮಂಜುನಾಥ ನಾಯ್ಕ ಅವರನ್ನು ನಗರಬಸ್ತಿಕೇರಿ ಗ್ರಾಮ ಪಂಚಾಯತ್‌ ಕಾರ್ಯಾಲಯದಲ್ಲಿ
ಸನ್ಮಾನಿಸಿದರು.ಯುವಕ ಪ್ರದೀಪ್‌ ಹದಿನೇಳು ಚಾಕ್‌ಪೀಸ್‌ ನಲ್ಲಿ ರಾಷ್ಟ್ರಗೀತೆಯನ್ನು ಮತ್ತು ಒಂದು ಚಾಕ್‌ಪೀಸ್‌ನಲ್ಲಿ ರವೀಂದ್ರನಾಥ್‌ ಠಾಗೋರ್‌ ಅವರ ಹೆಸರನ್ನು ಕೇವಲ 18 ತಾಸುಗಳ ಅವಧಿಯಲ್ಲಿ ಕೆತ್ತಿ ಅದನ್ನು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಮತ್ತು ಏಷಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಕಳುಹಿಸಿದ್ದ. ಅವರು ಅದನ್ನು ಸಂಪೂರ್ಣವಾಗಿ ಪರಿಶೀಲಿಸಿ ಪ್ರದೀಪ್‌ ಹೆಸರನ್ನು ದಾಖಲಿಸಿಕೊಂಡಿದ್ದರು.ಜಿಲ್ಲೆಯಾದ್ಯಂತ ಪ್ರದೀಪ್‌ ಪ್ರತಿಭೆಗೆ ಅಭಿನಂದನೆಗಳ ಮಹಾಪುರವೇ ಹರಿದು ಬಂದಿತ್ತು.

ಅಂತೆಯೇ ನಗರಬಸ್ತಿಕೇರಿ ಗ್ರಾಮ ಪಂಚಾಯತ್‌ ಕಾರ್ಯಾಲಯದಲ್ಲಿ ಪ್ರಥಮವಾಗಿ ಸನ್ಮಾನ ಲಭಿಸಿತು.ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಮಂಜುನಾಥ್‌ ನಾಯ್ಕ ಅವರು ಪ್ರದೀಪ್‌ ಅವರ ವಿನೂತನ ದಾಖಲೆಯನ್ನು ಕೊಂಡಾಡಿದರು.ಯಾವುದೇ ಸಾಧನೆ ಮಾಡುವುದು ಸುಲಭದ ಮಾತಲ್ಲ. ಅದರಲ್ಲೂ ದಾಖಲೆಗಳ ಸಾಲಿಗೆ ಸೇರುವ ಪ್ರಯತ್ನ ಕೆಲವರಿಗೆ ಕನಸಿನ ಮಾತಾಗಿರುತ್ತದೆ.ಆದರೆ ಗ್ರಾಮೀಣ ಪ್ರತಿಭೆಯಾಗಿ ಹೊರಹೊಮ್ಮಿ ತನ್ನ ಸಾಧನೆಯನ್ನು ಪ್ರತಿಷ್ಠಿತ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ ನಲ್ಲಿ ದಾಖಲಿಸಿರುವುದು ನಮ್ಮ ಗ್ರಾಮಕ್ಕೆ ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು. ಇನ್ನಷ್ಟು ದಾಖಲೆ ಮಾಡಿ ಸನ್ಮಾನ,ಪುರಸ್ಕಾರ ಪಡೆಯಲಿ ಎಂದು ಅವರು ಶುಭಕೋರಿದರು.

ಈ ಸಂದರ್ಭದಲ್ಲಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಈರಪ್ಪ ಲಮಾಣಿ,ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ಜಯಂತಿ ನಾಯ್ಕ,ಸದಸ್ಯರುಗಳಾದ ಮಹೇಶ್‌ ನಾಯ್ಕ ಅಡಿಗದ್ದೆ,ಕಾರ್ಲೊಸ್‌ ಡಿಸೋಜಾ,ಕೃಷ್ಣ ಮರಾಠಿ,ಸುನೀತಾ ಹೆಗಡೆ,ಸುನಂದಾ ನಾಯ್ಕ,ರೇಷ್ಮಾ ನಾಯ್ಕ,ಮಂಜುನಾಥ್‌ ನಾಯ್ಕ ಸೇರಿದಂತೆ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button