ನೆರವಿನ ಹಸ್ತ ಚಾಚಿದ ನಾಮಧಾರಿ ಯುವ ವೇದಿಕೆ

ಕಾರವಾರ : ಬೆಂಗಳೂರಿಗೆ ಉದ್ಯೋಗಕ್ಕೆಂದು ಹೋಗಿ ಅಲ್ಲಿಯೇ ಜಿಲ್ಲೆಯ ಯುವಕ ರನ್ನು ಸಂಘಟಿಸಿ ಸಂಘ ಕಟ್ಟಿಕೊಂಡು ಉತ್ತಮ ಕಾರ್ಯ ಮಾಡುತ್ತಿರುವ ಕರ್ನಾಟಕ ರಾಜ್ಯ ನಾಮಧಾರಿ ಯುವ ವೇದಿಕೆ ಬೆಂಗಳೂರು, ಕೋವಿಡ್ ನಿಂದ ಆರ್ಥಿಕವಾಗಿ ಸಂಕಷ್ಟಕ್ಕೊಳಗಾದ ಜಿಲ್ಲೆಯ ಸಂತ್ರಸ್ತರಿಗೆ ಆಸರೆಯಾಗುತ್ತಿದ್ದಾರೆ.
ಸಿದ್ದಾಪುರ ಮೂಲದ ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಉದ್ಯಮಿ ಗಣಪತಿ ನಾಯ್ಕ ಇವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ಸದಸ್ಯರ ನ್ನೊಳಗೊಂಡ ತಂಡ ಉತ್ತಮ ಉದ್ದೇಶದೊಂದಿಗೆ ಪ್ರಾರಂಭ ಗೊಂಡು ಜಿಲ್ಲೆಯ ಅನೇಕ ಬಡ ಕುಟುಂಬದವರಿಗೆ ಶೈಕ್ಷಣಿಕ ವಾಗಿ,ಆರ್ಥಿಕವಾಗಿ ಸಹಾಯ ಹಸ್ತ ನೀಡಿ ಎಲೆಮರೆಯ ಕಾಯಿಯಂತೆ ತಮ್ಮ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಕಳೆದ ವರ್ಷದಂತೆ ಈ ವರ್ಷವೂ ಯುವಕರ ತಂಡವು ಉತ್ತರ ಕನ್ನಡ ಜಿಲ್ಲೆಯ ಆಯ್ದ ಭಾಗದಲ್ಲಿ ಕೋವಿಡ್ ವಿಷಮ ಪರಿಸ್ಥಿತಿಯಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಎಲ್ಲಾ ವರ್ಗದ ಅರ್ಹ ಫಲಾನುಭವಿ ಗಳಿಗೆ ಒಂದು ತಿಂಗಳಿಗೆ ಸಾಕಾಗುವಷ್ಟು ದಿನಸಿ ಆಹಾರ ಪೊಟ್ಟಣವನ್ನು ವಿತರಿಸಿದೆ.
ಈಗಾಗಲೇ ಜಿಲ್ಲೆಯ ಕುಮಟಾ, ಭಟ್ಕಳ,ಅಂಕೋಲಾ,ಶಿರಸಿ ಹಾಗೂ ಸಿದ್ದಾಪುರದ ಕೆಲ ಭಾಗಗಳಲ್ಲಿ ಲಾಕ್ ಡೌನ್ ನಿಂದಾಗಿ ಉದ್ಯೋಗ ವಂಚಿತ ಕುಟುಂಬಕ್ಕೆ ಹಾಗೂ ಅರೋಗ್ಯ ಸಮಸ್ಯೆ ಎದುರಿಸುತ್ತಿರುವ ನೂರಾರು ಕುಟುಂಬಗಳಿಗೆ 2 ಲಕ್ಷಕ್ಕೂ ಅಧಿಕ ಮೌಲ್ಯದ ಆಹಾರ ಸಾಮಗ್ರಿಗಳನ್ನು ನೀಡಿ ಆಸರೆಯಾಗಿದೆ.
ಕೊರೋನಾ ರೋಗಕ್ಕೆ ತುತ್ತಾಗಿ ಜೀವ ಕೆಳೆದುಕೊಂಡ ಕೆಲ ಮನೆಗಳಲ್ಲಿ ದುಡಿಯುವ ಕೈಗಳಿಲ್ಲದೇ ಕಂಗಾಲಾಗಿದ್ದ ಕುಟುಂಬಗಳಿಗೆ ಅವಶ್ಯಕ ವಸ್ತು ನೀಡಿ ಸ್ವಾಂತನ ಹೇಳಿದೆ. ಕೊರೋನಾ ಇಲ್ಲದ ಸಂದರ್ಭದಲ್ಲಿಯೂ ಈ ವೇದಿಕೆಯಿಂದ ಜಿಲ್ಲೆಯ ಬಡ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಿದೆ.ಜಿಲ್ಲೆಯ ಹಲವು ತಾಲೂಕಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಉಚಿತ ತರಬೇತಿಯನ್ನು ಸಹ ನೀಡಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ನೆರವಾಗಿದೆ.ಈ ಎಲ್ಲ ಸಮಾಜಮುಖಿ ಕಾರ್ಯವನ್ನು ವೇದಿಕೆಯ ವಿವಿಧ ತಾಲೂಕಿನ 24 ಸದಸ್ಯರು ಹಾಗೂ ದಾನಿಗಳ ಸಹಾಯದಿಂದ ಮಾಡಿದ್ದು, ಅವರೆಲ್ಲರನ್ನು ಈ ಸಂದರ್ಭ ದಲ್ಲಿ ವೇದಿಕೆಯು ಸ್ಮರಿಸಿ ಕೃತಜ್ಞತೆ ಸಲ್ಲಿಸಿದೆ.
ದೂರದ ಬೆಂಗಳೂರಿನಲ್ಲಿದ್ದು ಕೊಂಡು ಸಂಕಷ್ಟದಲ್ಲಿರುವ ತಮ್ಮೂರಿನ ಕುಟುಂಬಗಳ ನೆರವಿಗೆ ಧಾವಿಸುತ್ತಿರುವ ಇವರ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
————
ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯಲ್ಲಿಯ ತೀವ್ರ ಸಂಕಷ್ಟದಲ್ಲಿದ್ದ ಎಲ್ಲ ಜಾತಿ ಜನಾಂಗದವರ ಕುಟುಂಬಕ್ಕೆ ನೆರವು ನೀಡಿದ್ದೇವೆ. ಮುಂದೆಯೂ ಅವರ ಸಂಕಷ್ಟಕ್ಕೆ ನಮ್ಮ ಕೈಲಾದಷ್ಟು ಸಹಾಯ ಮಾಡುವ ಅಭಿಲಾಷೆ ಇದೆ.
-ಗಣಪತಿ ನಾಯ್ಕ,ಅಧ್ಯಕ್ಷರು, ಕರ್ನಾಟಕ ರಾಜ್ಯ ನಾಮಧಾರಿ ಯುವ ವೇದಿಕೆ,ಬೆಂಗಳೂರು