ಪ್ರಕೃತಿ ವಿಕೋಪದ ಮುಂಜಾಗೃತಾ ಕ್ರಮವಾಗಿ ಭಟ್ಕಳ ತಾಲೂಕಿನಲ್ಲಿ ಭಾರೀ ಸಿದ್ಧತೆ

ಕಾರವಾರ : ಭಟ್ಕಳ ತಾಲೂಕಿನಲ್ಲಿ ಪ್ರಕೃತಿ ವಿಕೋಪದಡಿಯಲ್ಲಿ ಆಗುವ ಅನಾಹುತವನ್ನು ತಡೆಯಲು ಆಯಾ ಪಂಚಾಯತ ಮಟ್ಟ ದಲ್ಲಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಟಾಸ್ಕ್ ಪೋರ್ಸ್ ತಂಡ ರಚಿಸಿ ಸಿದ್ದತೆಯನ್ನು
ಮಾಡಿಕೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ಅವರು ಭಟ್ಕಳದ ಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ಬುಧವಾರ ಸಂಜೆ ಅಧಿಕಾರಿಗಳ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ.ಸದ್ಯ ಜಿಲ್ಲೆಯಲ್ಲಿ ೬% ಸೋಂಕು ಇದ್ದು, ಮುಂದಿನ ದಿನಗಳಲ್ಲಿ ಲಾಕ್ ಡೌನ್ ಅನ್ನು ಹಂತ ಹಂತವಾಗಿ ಕಡಿಮೆಗೊಳಿಸಲಾಗುವುದು ಎಂದರಲ್ಲದೇ ಸರಕಾರದ ನಿರ್ದೇಶನದಂತೆ ಜೂನ್,೧೪ ರ ತನಕ ಲಾಕ್ ಡೌನ್ ಮುಂದುವರಿಯುತ್ತದೆ. ಸೋಂಕಿನ ಪ್ರಮಾಣ ಕಡಿಮೆಯಾಗುವವರೆಗೂ ಕೋವಿಡ್ ವಿರುದ್ದ ನಮ್ಮ ಹೋರಾಟ ಮುಂದುವರಿಯುತ್ತದೆ. ಎಂದರಲ್ಲದೇ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ಸೋಂಕಿನ ವಿರುದ್ದ ಹೋರಾಟ ನಡೆಸುತ್ತಿರುವುದರಿಂದ ಸೋಂಕಿನ ಪ್ರಮಾಣ ಒಂದು ಹಂತಕ್ಕೆ ಬಂದಿದೆ.
ಜಿಲ್ಲೆಯಲ್ಲಿ ವ್ಯಾಕ್ಸಿನ್
ಲಭ್ಯವಿದ್ದು,೪೮ ವರ್ಷ ಮೇಲ್ಪಟ್ಟವರು ಹಾಗೂ ೨ ನೇ ಲಸಿಕೆ ಪಡೆಯುವವರು ಸಕಾಲದಲ್ಲಿ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆಯನ್ನು ಪಡೆಯಬೇಕು.೪೪ ವರ್ಷ ಕೆಳಗಿನವರಿಗೆ ಅದ್ಯತೆಯ ಮೇರೆಗೆ ಈಗಾಗಲೇ ಲಸಿಕೆಯನ್ನು ನೀಡುತ್ತಿದ್ದು, ಭಟ್ಕಳದಲ್ಲಿ ಲಸಿಕಾ ಕೇಂದ್ರವನ್ನು ಹೆಚ್ಚಿಸಿದ್ದೇವೆ. ಸಾರ್ವಜನಿಕರು ಮುಂದೆ ಬಂದು ಲಸಿಕೆಯನ್ನು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಮುಂದಿನ ಒಂದೆರೆಡು ದಿನಗಳಲ್ಲಿ ಶಿಕ್ಷಕರಿಗೆ, ಇತರರಿಗೆ ಲಸಿಕೆ ನೀಡಲಿದ್ದು, ಸರಕಾರದಿಂದ ಬರುವ ಲಸಿಕೆಯ ಲಭ್ಯತೆಯ ಮೇರೆಗೆ ಜಿಲ್ಲೆಯಲ್ಲಿ ಲಸಿಕೆಯನ್ನು ನೀಡಲಿದ್ದೇವೆ ಎಂದರು.
ಮಳೆಗಾಲದ ಪೂರ್ವ ಸಿದ್ದತೆ ಯಾಗಿ ಈಗಾಗಲೆ ಜನಪ್ರತಿನಿಧಿ ಗಳ ಹಾಗೂ ಅಧಿಕಾರಿಗಳ ಸಭೆಯನ್ನು ನಡೆಸಿದ್ದೇವೆ.ಪ್ರಕೃತಿ ವಿಕೋಪದ ಅಡಿಯಲ್ಲಿ ಆಯಾ ಗ್ರಾಮ ಪಂಚಾಯತ ಮಟ್ಟದಲ್ಲಿ ಪ್ರಕೃತಿ ವಿಕೋಪ ತಡೆಯಲು ಟಾಸ್ಕಪೋರ್ಸನ್ನು ರಚಿಸಿ ಪ್ರಕೃತಿ ವಿಕೋಪ ತಡೆಯಲು ಸಿದ್ದರಾಗಿದ್ದೇವೆ ಎಂದರು. ದಿನಕ್ಕೆ ೪೮೦೦ ಕೊರೋನ ರ್ಯಾಪಿಡ್ ಟೆಸ್ಟ್ ನ್ನು ಮಾಡಲು ಯೋಜನೆ ಸಿದ್ದಪಡಿಸಿಕೊಂಡಿದ್ದೇವೆ ಎಂದರಲ್ಲದೇ,ಮಳೆಗಾಲದಲ್ಲಿ ಐ.ಆರ್.ಬಿ. ರಾಷ್ಟೀಯ ಹೆದ್ದಾರಿ ಕಾಮಗಾರಿಯಿಂದ ತೊಂದರೆಗೊಳಗಾಗುತ್ತಿರುವ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಐ.ಆರ್.ಬಿ. ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಪರ್ಯಾಯ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದರು.
ಸರಕಾರದಿಂದ ಅಸಂಘಟಿತ ಕಾರ್ಮಿಕರಾದ ಮಡಿವಾಳರು, ಕುಂಬಾರರು,ಕ್ಷೌರಿಕರು,
ದರ್ಜಿಗಳು,ಮನೆಕೆಲಸದವರಿಗೆ ೨ ಸಾವಿರ ರೂ.ಸಹಾಯಧನ ಮಂಜೂರಿಯಾಗಿದ್ದು,ಈ ವಲಯದ ಕಾರ್ಮಿಕರು ತಮ್ಮ ಸಮೀಪದ ತಹಶೀಲ್ದಾರರು, ಪಿ.ಡಿ.ಓ.ಅಥವಾ ಗ್ರಾಮ ಲೆಕ್ಕಿಗರಿಂದ ಪ್ರಮಾಣ ಪತ್ರ ಪಡೆದು ಸೇವಾ ಸಿಂದು ವೆಬ್ ಸೈಟಲ್ಲಿ ಕಾರ್ಮಿಕರ ವಿವರ ತುಂಬಿ ಸರಕಾರದ ಸಹಾಯಧನದ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಶಾಸಕ ಸುನೀಲ್ ನಾಯ್ಕ,ಭಟ್ಕಳ ಉಪವಿಭಾಗಾದಿಕಾರಿ ಮಮತಾದೇವಿ,ಡಿ.ಎಚ್.ಓ. ಶರತ್ ನಾಯಕ,ತಹಶೀಲ್ದಾರ ರವಿಚಂದ್ರ,ಅಧಿಕಾರಿಗಳು ಇದ್ದರು.