ಜಿಲ್ಲಾಮಟ್ಟದ ಪ್ರಾಥಮಿಕ ಶಾಲೆಗಳ ಆನ್ಲೈನ್ ತರಗತಿ ಉದ್ಘಾಟನೆ

ಕಾರವಾರ : ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲೆಗಳ ಆನ್ ಲೈನ್ ತರಗತಿಗಳ ಪಾಠದ ವ್ಯವಸ್ಥೆಯನ್ನು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಯಲ್ಲಾಪುರ ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಉದ್ಭಾಟಿಸಿದರು.
ನಂತರ ಮಾತನಾಡಿದ ಸಚಿವರು, ಉತ್ತಮವಾದ ಶಿಕ್ಷಣ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸಿಗಬೇಕು ಎನ್ನುವ ದೃಷ್ಟಿಯಿಂದ ಶಿರಸಿ ಶೈಕ್ಷಣಿಕ ಜಿಲ್ಲೆ ಹಾಗೂ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ ಮಕ್ಕಳಿಗೆ ಶಿಕ್ಷಣ ಇಲಾಖೆಯ ಮೂಲಕ ಆನ್ ಲೈನ್ ಶೈಕ್ಷಣಿಕ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ. ಕೋವಿಡ್ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಗಾಧವಾದ ದುಷ್ಪರಿಣಾಮ ಬೀರಿದೆ. ಮೂರನೇ ಅಲೆ ಮಕ್ಕಳ ಮೇಲೆ ಪ್ರಭಾವ ಬೀರಲಿದೆ ಎಂದು ವೈದ್ಯಕೀಯ ಪರಿಣಿತರು ಎಚ್ಚರಿಕೆ ನೀಡಿದ್ದಾರೆ.
ಹೀಗಾಗಿ ಶಾಲೆಗಳನ್ನು ಪ್ರಾರಂಭ ಮಾಡುವುದು ವಿಳಂಬವಾಗುತ್ತಿದೆ. ಈ ಹಿನ್ನೆಲೆ ಯಲ್ಲಿ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಆನ್ ಲೈನ್ ಕ್ಲಾಸ್ ಪ್ರಾರಂಭಿಸುತ್ತಿದೆ.ಸ್ವಲ್ಪ ದಿನ ಶಾಲೆ ಪ್ರಾರಂಭವಾಗುವುದು ವಿಳಂಬವಾದರೂ ಕೂಡ ಮಕ್ಕಳು ಚೆನ್ನಾಗಿ ಓದಬೇಕು.ಆನ್ ಲೈನ್ ಮೂಲಕ ಓದಿ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು,ಶಾಲೆ ಪ್ರಾರಂಭವಾಗುವುದು ವಿಳಂಬವಾದರೂ ತೊಂದರೆಯಿಲ್ಲ ಆದರೆ,ಒಂದೇ ಒಂದು ಮಗುವನ್ನು ಕಳೆದುಕೊಳ್ಳಲು ನಮ್ಮ ಸರ್ಕಾರ ಸಿದ್ಧವಿಲ್ಲ ಎಂದರು.
ಶಿರಸಿ ಶೈಕ್ಷಣಿಕ ಜಿಲ್ಲೆ ಉಪನಿರ್ದೇಶಕ ದಿವಾಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.