ಹೊನ್ನಾವರದಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ವಿರೋಧ; ಸಮುದ್ರಕ್ಕೆ ಹಾರಲು ಯತ್ನಿಸಿದ ಯುವಕರು

ಕಾರವಾರ : ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಹೊನ್ನಾವರದ ಖಾಸಗಿ ಬಂದರು ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತೆ ಪೊಲೀಸ್ ಭದ್ರತೆಯಲ್ಲಿ ಇಂದು ಪ್ರಾರಂಭಗೊಂಡಿದೆ.ಈ ಹಿನ್ನೆಲೆಯಲ್ಲಿ ಆತಂಕಗೊಂಡ ಮೀನುಗಾರರು ಬೃಹತ್ ಪ್ರತಿಭಟನೆ ನಡೆಸಿದ್ದು,ಹತ್ತಾರು ಯುವಕರು ಸಮುದ್ರಕ್ಕೆ ಹಾರಲು ಯತ್ನಿಸಿರುವ ಘಟನೆ ನಡೆದಿದೆ.
ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾ ಭಾಗದ ಶರಾವತಿ ನದಿ ಅಳಿವೆ ಪ್ರದೇಶದಲ್ಲಿ ಸುಮಾರು 600 ಕೋಟಿ ರೂ.ವೆಚ್ಛದಲ್ಲಿ ಹೆಚ್ಪಿಪಿಎಲ್ ಕಂಪನಿ ವಾಣಿಜ್ಯ ಬಂದರು ನಿರ್ಮಿಸುತ್ತಿದೆ.ಸರ್ಕಾರ ವಾಣಿಜ್ಯ ಬಂದರು ನಿರ್ಮಾಣಕ್ಕೆ 93 ಎಕರೆ ಸ್ಥಳವನ್ನು ಮಂಜೂರಿ ಮಾಡಿದೆ.ಕೆಲ ತಿಂಗಳ ಹಿಂದೆ ವಾಣಿಜ್ಯ ಬಂದರು ಕಾಮಗಾರಿ ಪ್ರಾರಂಭಿಸಿದ್ದ ಕಂಪನಿ ಸ್ಥಳೀಯರ ವಿರೋಧದಿಂದ ಸ್ಥಗಿತಗೊಳಿಸಿತ್ತು. ಆದರೆ ಇಂದು ಬೆಳ್ಳಂಬೆಳಿಗ್ಗೆ ಮತ್ತೆ 500ಕ್ಕೂ ಹೆಚ್ಚು ಪೊಲೀಸರ ಭದ್ರತೆಯಲ್ಲಿ ಕಾಮಗಾರಿ ನಡೆಸಲು ಮುಂದಾಗಿದ್ದು,ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಳಿಗ್ಗೆಯಿಂದಲೇ ಸುರಿಯುವ ಮಳೆಯನ್ನು ಲೆಕ್ಕಿಸದೆ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.ಆದರೂ ಕಾಮಗಾರಿ ಸ್ಥಗಿತಗೊಳಿಸದ ಹಿನ್ನೆಲೆ ಕೆಲ ಯುವಕರು ಸಮುದ್ರಕ್ಕೆ ಹಾರಲು ಯತ್ನಿಸಿದ್ದಾರೆ.ಸದ್ಯ ಪೊಲೀಸರು ಹಾಗೂ ಸ್ಥಳೀಯರು ಯುವಕರನ್ನು ತಡೆದಿದ್ದು, ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ.ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು,ಹೊನ್ನಾವರ ತಹಶೀಲ್ದಾರ ವಿವೇಕ್ ಶೇಣ್ವಿ ಅವರು 144 ನೇ ಕಲಂ ಜಾರಿಗೊಳಿಸಿ ನಿಷೇದಾಜ್ಞೆ ಹೇರಿದ್ದಾರೆ.ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ್ ಕೊಚರೇಕರ್ ಅವರು ಹೇಳಿಕೆ ನೀಡಿ,ಕೋವಿಡ್ ಸಂದರ್ಭದಲ್ಲಿ ಮೀನುಗಾರರನ್ನು ಸಂಕಷ್ಟಕ್ಕೆ ದೂಡುವ ಸರಕಾರದ ಕ್ರಮ ಸರಿಯಲ್ಲ.ಪರಿಸ್ಥಿತಿ ಕೈ ಮೀರುವ ಮುನ್ನವೇ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಅವರು ಸರಕಾರವನ್ನು ಆಗ್ರಹಿಸಿದ್ದಾರೆ.