ಉತ್ತರ ಕನ್ನಡ

ನೇಪಾಳದ ಗಡಿ ದಾಟಿ ಭಟ್ಕಳಕ್ಕೆ ಬಂದ ಪಾಕಿಸ್ತಾನಿ ಮಹಿಳೆ ಬಂಧನ : ಆಗಿದ್ದೇನು ?

ವರದಿ: ತೇಜಸ್ವಿ

ಕಾರವಾರ : ಅಕ್ರಮವಾಗಿ ಬಾಂಗ್ಲಾ,ಪಾಕಿಸ್ತಾನದಿಂದ ದೇಶಕ್ಕೆ ನುಸುಳುವ ವರದಿ ಆಗಾಗ ಬೆಳಕಿಗೆ ಬರುತ್ತಲೇ ಇರುತ್ತದೆ.ಇನ್ನು ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಮಹಿಳೆ ಯನ್ನು ಪೊಲೀಸರು ಎಂಟು ವರ್ಷದ ನಂತರ ಬಂಧಿಸಿದ್ದಾರೆ.

ವಿಶೇಷ ಅಂದರೆ ಕಳೆದ ಎಂಟು ವರ್ಷದಿಂದ ನಕಲಿ ದಾಖಲೆ ಗಳನ್ನು ಸೃಷ್ಟಿಸಿ ಮಹಿಳೆ ಭಟ್ಕಳದಲ್ಲಿಯೇ ನೆಲೆಸಿರುವ ವಿಷಯ ತನಿಖೆ ವೇಳೆ ಬಹಿರಂಗವಾಗಿದೆ.ಪಾಕಿಸ್ತಾನ ಮೂಲದ ಖತೀಜಾ ಮಹರಿನ್ ಎನ್ನುವ ಮಹಿಳೆ ಕಳೆದ ಎಂಟು ವರ್ಷದಿಂದ ಭಾರತದ ಭಟ್ಕಳಕ್ಕೆ ಅಕ್ರಮವಾಗಿ ಆಗಮಿಸಿ ನೆಲಸಿದ್ದಳು.ಖತೀಜಾ ಭಟ್ಕಳ ಮೂಲದ ಜಾವೀದ್ ಮೊಹಿದ್ದೀನ್ ಎನ್ನುವ ವ್ಯಕ್ತಿಯನ್ನು 2014 ರಲ್ಲಿ ದುಬೈನಲ್ಲಿ ಪ್ರೀತಿಸಿ ಮದುವೆಯಾಗಿದ್ದಳು.

2014 ರಲ್ಲಿಯೇ ಪ್ರವಾಸಿ ವೀಸಾ ಮೂಲಕ ಭಟ್ಕಳಕ್ಕೆ ಬಂದಿದ್ದ ಈಕೆ ನಂತರ ಪಾಕಿಸ್ತಾನಕ್ಕೆ ಮರಳಿದ್ದಳು. ನಂತರ ನೇಪಾಳದ ಮೂಲಕ ನುಸುಳಿ 2015 ರಲ್ಲಿ ಅಕ್ರಮವಾಗಿ ಭಟ್ಕಳಕ್ಕೆ ಬಂದು ನೆಲೆಸಿದ್ದಳು.

ಎಂಟು ವರ್ಷದಿಂದ ಮಹಿಳೆ ಪಾಕಿಸ್ತಾನದಿಂದ ಬಂದು ಅಕ್ರಮವಾಗಿ ನೆಲೆಸಿದ್ದಾಳೆ ಎನ್ನುವ ದೂರಿನನ್ವಯ ಪೊಲೀಸರು ದಾಳಿ ನಡೆಸಿ ಆರೋಪಿತೆಯನ್ನು ಬಂಧಿಸಿದ್ದಾರೆ.

ಆರೋಪಿತೆ ಖತೀಜಾ ತನ್ನ ಪತಿಯೊಂದಿಗೆ ಭಟ್ಕಳದ ನವಾಯತ ಕಾಲೋನಿಯ ಮನೆಯಲ್ಲಿ ನೆಲೆಸಿದ್ದಳು. ದಂಪತಿಗಳಿಗೆ ಮೂವರು ಮಕ್ಕಳಿದ್ದಾರೆ.ಪಾಕಿಸ್ತಾನದಿಂದ ಬಂದ ಯಾವುದೇ ಮಾಹಿತಿ ಯನ್ನು ನೀಡಿರಲಿಲ್ಲ ಎನ್ನಲಾಗಿದೆ.ಇನ್ನು ಈಕೆ ಇದ್ದ ಮನೆಯನ್ನು ಶೋಧಿಸಿದಾಗ ಈಕೆಯ ವೋಟರ್ ಐಡಿ ಆಧಾರ್ ಖಾರ್ಡ್,ಪಾನ್ ಕಾರ್ಡ್ ಸಿಕ್ಕಿದೆ.ಭಾರತ ಮೂಲದವಳೇ ಎಂದು ದಾಖಲೆ ಸೃಷ್ಟಿ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.

ಆರೋಪಿ ವಿರುದ್ಧ ವಿದೇಶಿ ಕಾಯ್ದೆ ಉಲ್ಲಂಘನೆ ಮತ್ತು ಇತರೆ ಐಪಿಸಿ ಸೆಕ್ಷನ್ 468,471 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಮಹಿಳೆ ಮದುವೆಯಾಗಿ ಭಟ್ಕಳಕ್ಕೆ ಬಂದಿದ್ದಾದರೂ ಹೇಗೆ ?ಅಕ್ರಮವಾಗಿ ಭಾರತಕ್ಕೆ ಪ್ರವೇಶ ಮಾಡಿ ನಕಲಿ ದಾಖಲೆ ಸೃಷ್ಟಿಸಿ ಭಾರತದ ವೋಟರ್ ಐಡಿ, ಆಧಾರ್,ರೇಷನ್ ಕಾರ್ಡ್ ಮಾಡಿಸಿರುವುದು ಸಾಕಷ್ಟು ಗಂಭೀರ ಅಪರಾಧವಾಗಿದೆ. ಹೇಗೆ ಇವೆಲ್ಲವೂ ಸಾಧ್ಯವಾಯಿತು ಎಂಬ ಬಗ್ಗೆ ತನಿಖೆ ನಡೆಯಬೇಕಿದೆ.

ಆರೋಪಿ ಮಹಿಳೆ ವಾಸವಾಗಿದ್ದ ಮನೆ

ಭಟ್ಕಳದಲ್ಲಿ ಇದ್ದಾರೆ ಹಲವು ಪಾಕಿಸ್ತಾನಿ ಮಹಿಳೆಯರು.!

ಭಟ್ಕಳದಲ್ಲಿ ದುಬೈಗೆ ತೆರಳಿದ ವ್ಯಕ್ತಿಯೊಂದಿಗೆ ವಿವಾಹವಾಗುವುದು ಹೊಸತೇನಲ್ಲ.ಗುಪ್ತ ದಳದ ಮಾಹಿತಿ ಪ್ರಕಾರ ಎಂಟಕ್ಕೂ ಹೆಚ್ಚು ಮಹಿಳೆಯರು ಭಟ್ಕಳದ ಯುವಕರನ್ನು ಮದುವೆಯಾಗಿ ದ್ದಾರೆ.ಹಲವರು ಈಗಲೂ ಪಾಕಿಸ್ತಾನದ ಪಾಸ್ ಪೋರ್ಟ್ ಹೊಂದಿದ್ದಾರೆ.ವೀಸಾ ಅವಧಿ ಮುಗಿದ ನಂತರ ನವೀಕರಣ ಮಾಡಿಸಿಕೊಂಡು ನೆಲೆಸಿದ್ದಾರೆ.

ಇನ್ನು ಪಾಕಿಸ್ತಾನದಿಂದ ಎಲ್ಲವನ್ನೂ ಬಿಟ್ಟು ಇದೇ ನನ್ನ ಭೂಮಿ ಎಂದು ಬಂದ ಮಹಿಳೆಯರು ಇಲ್ಲಿಯೇ ಇದ್ದು, ಮೊಮ್ಮಕ್ಕಳನ್ನೂ ಸಹ ಕಂಡಿದ್ದಾರೆ.ಆದರೆ ಭಾರತದ ಪೌರತ್ವಕ್ಕಾಗಿ ಹಲವು ಭಾರಿ ಅರ್ಜಿ ಸಲ್ಲಿಸಿದರೂ ಈವರೆಗೂ ಪಾಕಿಸ್ತಾನದವರು ಎಂಬ ಕಾರಣಕ್ಕೆ ಭಾರತೀಯ ಪೌರತ್ವ ನೀಡಿಲ್ಲ.ಹೀಗಾಗಿ ಭಟ್ಕಳೀಗರನ್ನು ಮದುವೆಯಾದ ಬಹುತೇಕರು ಪೌರತ್ವ ಸಮಸ್ಯೆಯನ್ನು ಇಂದಿಗೂ ಎದುರಿಸುತ್ತಿದ್ದಾರೆ.

ಇನ್ನು ಪಾಕಿಸ್ತಾನದಿಂದ ಭಟ್ಕಳೀ ಗರನ್ನು ಮದುವೆಯಾದ ಮಹಿಳೆಯರ ಬಗ್ಗೆ ಭಾರತೀಯ ಗುಪ್ತದಳ ಮಾಹಿತಿ ಪಡೆದುಕೊಂಡು ಕಣ್ಣಿಟ್ಟಿದೆ. ಇದಲ್ಲದೇ ಪಾಕಿಸ್ತಾನದ ಪರ ಗುಪ್ತ ಮಾಹಿತಿದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರಾ ? ಎಂಬ ಬಗ್ಗೆಯೂ ತನಿಖೆಗಳು ನಡೆಯುತ್ತಲಿವೆ.ಇವೆಲ್ಲವನ್ನು ಹೊರತುಪಡಿಸಿದರೆ,ಭಟ್ಕಳ ಮತ್ತು ಪಾಕಿಸ್ತಾನಕ್ಕೆ ಮೊದಲಿನಿಂದಲೂ ವೈವಾಹಿಕ ನಂಟು ಇದೆ.ಭಾರತ ವಿಭಾಗ ಆಗುವ ಪೂರ್ವದ ನಂಟು ಇಲ್ಲಿದೆ.ಇಲ್ಲಿನ ಮಹಿಳೆಯರನ್ನು ಸಹ ಭಾರತ – ಪಾಕಿಸ್ತಾನ ವಿಭಾಗ ಪೂರ್ವ ನೆಂಟಸ್ತನದ ಸಂಬಂಧ ಇಂದಿಗೂ ಹಸಿಯಾಗಿದೆ.ಪಾಕಿಸ್ತಾನ ನಮ್ಮ ವೈರಿ ರಾಷ್ಟ್ರ ಎಂಬ ಒಂದೇ ಒಂದು ಕಾರಣಕ್ಕೆ ಎಲ್ಲರೂ ಭಯೋತ್ಪಾದಕರು ಎನ್ನುವ ಮಾತುಗಳನ್ನು ಆಡುವಂತಿಲ್ಲ. ಪ್ರೀತಿ – ಬಾಂಧವ್ಯಕ್ಕೆ ದೇಶದ ಹಂಗಿಲ್ಲ.

ಆದರೂ ದೇಶದ ಹಿತದೃಷ್ಟಿ ಇಲ್ಲಿ ಮುಖ್ಯವಾಗಿದ್ದು,ದೇಶಕ್ಕೆ ವಂಚಿಸಿ ಬರುವವರಿಗೆ ಶಿಕ್ಷೆ ಆಗಬೇಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button