ತೌಕ್ತೆ ಚಂಡಮಾರುತ ತಂದ ನಷ್ಟ; ಮಾಹಿತಿ ಕಲೆ ಹಾಕಲು ಕೇಂದ್ರ ತಂಡ ಭೇಟಿ

ಕಾರವಾರ : ತೌಕ್ತೆ ಚಂಡಮಾರುತದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ತಿಂಗಳು ಅಂದರೆ ಮೇ 14 ರಿಂದ 17 ರ ವರೆಗೆ ಸಂಭವಿಸಿದ ನಷ್ಟದ ಕುರಿತು ಮಾಹಿತಿ ಪಡೆಯಲು ಬಂದಂತಹ ಕೇಂದ್ರದ ಅಧಿಕಾರಿಗಳ ತಂಡಕ್ಕೆ ರಾಜ್ಯ ಕಂದಾಯ ಇಲಾಖೆ ಆಯುಕ್ತರಾದ ಡಾ.ಮನೋಜ್ ರಾಜನ್ ಅವರ ನೇತೃತ್ವದಲ್ಲಿ ಮಾಹಿತಿ ನೀಡಲಾಯಿತು.
ಜಿಲ್ಲಾಧಿಕಾರಿ ಕಛೇರಿಗೆ ಭೇಟಿ ನೀಡಿದ ಕೇಂದ್ರ ಅಧಿಕಾರಿಗಳ ತಂಡಕ್ಕೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ತಮ್ಮ ಜಿಲ್ಲೆಯಲ್ಲಿ ಸಂಭವಿಸಿದ ಹಾನಿಗಳ ಕುರಿತು ವಿವರಿಸಿದರು.
ರಾಜ್ಯ ವಿಪತ್ತು ಪರಿಹಾರ ನಿಧಿ ಹಾಗೂ ಕೇಂದ್ರ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿ ಅನ್ವಯ 27.71 ಕೋಟಿ ಮತ್ತು ಸಮುದ್ರ ಕೊರೆತದಿಂದ 77.40 ಕೋಟಿಯಂತೆ ಒಟ್ಟು ಅಂದಾಜು 105.11 ಕೋಟಿ ಮೌಲ್ಯದ ಆಸ್ತಿ ನಷ್ಟವಾಗಿರುತ್ತದೆ.164.58 ಹೆಕ್ಟೇರ್ ಕೃಷಿಭೂಮಿ,164 ಮನೆ,33 ಸೇತುವೆಗಳು, ಭಾಗಶಃ 230 ಬೋಟ್ಗಳು, ಶಾಲಾ ಮತ್ತು ಸರ್ಕಾರಿ ಕಟ್ಟಡಗಳು ಸೇರಿದಂತೆ 22 ಕಟ್ಟಡಗಳು ಹಾನಿಗೊಂಡಿವೆ.ಭಟ್ಕಳ ಹಾಗೂ ಕುಮಟಾದಲ್ಲಿ ತಲಾ ಒಂದರಂತೆ 2 ಜೀವಗಳು ತೌಕ್ತೆ ಚಂಡಮಾರುತದಿಂದ ಬಲಿಯಾಗಿವೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.
ಈ ಸಂಧರ್ಭದಲ್ಲಿ ಕೇಂದ್ರ ತಂಡದ ಅಧಿಕಾರಿಗಳಾದ ಸುಶೀಲ್ ಪಾಲ್,ಸದಾನಂದ ಬಾಬು,ಓಂ ಕೀಶೋರ,ಡಾ. ಪೊನ್ನು ಸ್ವಾಮಿ,ಡಾ ಶ್ರೀನಿವಾಸ ರೆಡ್ಡಿ,ಮಹೇಶ ಕುಮಾರ,ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಮ್. ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್.ಕೆ. ಸೇರಿದಂತೆ ಇತರರು ಇದ್ದರು.