ಮುರ್ಡೇಶ್ವರದತ್ತ ಹರಿದುಬರುತ್ತಿರುವ ಪ್ರವಾಸಿಗರ ದಂಡು

ಕಾರವಾರ : ಸತತ ಎರಡು ವರ್ಷಗಳ ಕಾಲ ಕೋವಿಡ್ ಮಹಾಮಾರಿ ವ್ಯಾಪಾರ, ವಹಿವಾಟು, ಉದ್ಯೋಗ, ಕೂಲಿ ಎಲ್ಲದರ ಮೇಲೂ ಕರಾಳ ಪರಿಣಾಮ ಬೀರಿರುವುದು ಗೊತ್ತೇ ಇದೆ. ಪ್ರವಾಸೋದ್ಯಮ ಕೂಡ ಈ ಪೆಟ್ಟು ತಿಂದಿರುವ ವಲಯವೇ. ಮುರುಡೇಶ್ವರದಂಥ ಪ್ರವಾಸಿ ತಾಣಗಳು ಲಾಕ್ಡೌನ್ ಕಾರಣದಿಂದ ಬರಿದಾಗಿದ್ದವು. ಈಗ ವಿಶ್ವಪ್ರಸಿದ್ಧ ಮುರ್ಡೇಶ್ವರಕ್ಕೆ ನಿಧಾನವಾಗಿ ಪ್ರವಾಸಿಗರು ಬರಲಾರಂಭಿಸಿದ್ದಾರೆ.
ಕಳೆದ ವರ್ಷವೂ ಸಹ ಕೋವಿಡ್ ಜನರನ್ನು ಬಿಡದೇ ಕಾಡಿತ್ತು. ಆಗಲೂ ಸಹ ಲಕ್ಷಗಟ್ಟಲೆ ಹಣವು ಪ್ರವಾಸೋದ್ಯಮದಿಂದ ನಷ್ಟ ಆಗಿತ್ತು.ಈ ವರ್ಷದ ಬೇಸಿಗೆಯ ಅವಧಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಕೋವಿಡ್ ಪ್ರಕರಣ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಸರಕಾರ ಲಾಕ್ಡೌನ ಘೋಷಣೆ ಮಾಡಿತ್ತು.ಅದರಂತೆ ಪ್ರವಾಸಿಗರಿಂದಲೇ ತುಂಬಿರುತ್ತಿದ್ದ ವಿಶ್ವ ಪ್ರಸಿದ್ಧ ಮುರ್ಡೇಶ್ವರ ಸಹ ಲಾಕ್ ಡೌನನಿಂದ ಜನರಿಲ್ಲದೇ ಬಿಕೋ ಎಂದಿತ್ತು.
ಕಳೆದ ಒಂದೂವರೆ ತಿಂಗಳ ಲಾಕ್ಡೌನ ಬಳಿಕ ಸರಕಾರವೂ ಕೋವಿಡ್ ಪಾಸಿಟಿವಿಟಿ ದರ ಇಳಿಕೆಯಿರುವ ಜಿಲ್ಲೆಯಲ್ಲಿ ಲಾಕ್ಡೌನ್ ಸಡಿಲಿಕೆ ನೀಡಿದ ಬೆನ್ನಲ್ಲೇ ಜನರಿಗೆ ಓಡಾಟ ನಡೆಸಲು ಅನುಕೂಲಕರವಾಗಿದೆ.ಸದ್ಯ ಮುರ್ಡೇಶ್ವರದಲ್ಲಿ ಬಂದ್ ಆಗಿದ್ದ ಅಂಗಡಿ ಮುಂಗಟ್ಟುಗಳು ತೆರೆದು ವ್ಯಾಪಾರ ಮಾಡಲು ವ್ಯಾಪಾರಿಗಳಿಗೆ ಅನುಕೂಲವಾಗಿದೆ.ಅತ್ತ ಪ್ರವಾಸಿಗರ ಬರುವಿಕೆಯೂ ಮುರ್ಡೇಶ್ವರದ ವ್ಯಾಪಾರಿಗಳಿಗೆ ಸಂತಸ ತಂದಿದೆ.
ಇನ್ನು ಸರಕಾರದ ಲಾಕ್ ಡೌನ ಸಡಿಲಿಕೆಯನ್ನೇ ಸದುಪಯೋಗಪಡಿಸಿಕೊಂಡ ಜನರು,ಮನೆಯಲ್ಲಿಯೇ ಕುಳಿತು ಬೇಸರ ಬಂದವರು ಪ್ರವಾಸಕ್ಕೆ ಹೊರಟಿದ್ದಾರೆ.ಈ ಹಿನ್ನೆಲೆಯಲ್ಲಿ ತಮ್ಮ ಪ್ರವಾಸದ ಮಾರ್ಗ ಮಧ್ಯೆ ಮುರ್ಡೇಶ್ವರಕ್ಕೆ ಬರುವವರ ಸಂಖ್ಯೆಯು ಜೋರಾಗಿದೆ.ದೇವಸ್ಥಾನಕ್ಕೆ ಪ್ರವೇಶ ನಿರ್ಭಂದವಿದ್ದರೂ ಸಹ ಸಮುದ್ರದಲ್ಲಿ ಮೋಜು ಮಸ್ತಿ ಮಾಡಿ ಕೆಲ ಗಂಟೆಗಳ ಕಾಲ ಪೇಟೆಯಲ್ಲಿ ಸುತ್ತಾಡಿ ಮುಂದಿನ ಪ್ರಯಾಣ ಮುಂದುವರೆಸುತ್ತಿದ್ದಾರೆ.ಇನ್ನು ಸಮುದ್ರದ ನೀರಿನ ಮಟ್ಟ ಸಹ ಏರಿಕೆಯಾಗಿದೆ.ಪ್ರವಾಸಿಗರು ಸಮುದ್ರಕ್ಕಿಳಿಯುವ ಮುನ್ನ ಎಚ್ಚರಿಕೆಯಿಂದ ನೀರಿಗಿಳಿಯಬೇಕಾಗಿದೆ.
ಸರಕಾರ ಹಾಗೂ ಜಿಲ್ಲಾಡಳಿತದ ಸೂಚನೆ ಮೇರೆಗೆ ಲಾಡ್ಜ್,ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡಿರುವುದು ಮುರ್ಡೇಶ್ವರದಲ್ಲಿನ ಲಾಡ್ಜ್ ರೆಸ್ಟೋರೆಂಟ್ ಮಾಲೀಕರಿಗೆ ಸಹಕಾರಿಯಾಗಿದೆ.ಸದ್ಯ ಬೇರೆ ಜಿಲ್ಲೆ,ತಾಲೂಕಿನಿಂದ ಮುರ್ಡೇಶ್ವರಕ್ಕೆ ಬರುವ ಪ್ರವಾಸಿಗರ ಮೇಲೆ ನಿಗಾ ವಹಿಸಿ ಕೋವಿಡ್ ಮಾರ್ಗಸೂಚಿಯಂತೆ ಲಾಡ್ಜ್, ರೆಸ್ಟೋರೆಂಟ್ ಮಾಲೀಕರು ವಸತಿ ಸೌಲಭ್ಯ ನೀಡುತ್ತಿದ್ದಾರೆ.
ಅನ್ ಲಾಕ್ ದಿನದಿಂದ ಮುರ್ಡೇಶ್ವರದಲ್ಲಿ ವ್ಯಾಪಾರ ವಹಿವಾಟು ಜೋರಾಗಿದೆ. ಬೆಳಿಗ್ಗೆ 6 – ರಿಂದ ಸಾಯಂಕಾಲ 5 ಗಂಟೆಯ ಅವಧಿಯಲ್ಲಿ ಜನರು ಪೇಟೆಯಲ್ಲಿ ಸೇರುತ್ತಿದ್ದು,ಇನ್ನಷ್ಟು ಸಡಿಲಿಕೆಗೆ ವ್ಯಾಪಾರಿಗಳು,ಲಾಡ್ಜ್ ರೆಸ್ಟೋರೆಂಟ್ ಮಾಲೀಕರು ಕಾತುರದಲ್ಲಿದ್ದಾರೆ. ಕಾರಣ ಪ್ರವಾಸಿಗರು ಹೆಚ್ಚಾಗಿ ಆಗಮಿಸುವ ಮಾರ್ಚ್, ಎಪ್ರಿಲ್ ತಿಂಗಳ ಅವಧಿಯಲ್ಲಿ ಲಾಕ್ ಡೌನ್ ಆಗಿರುವುದಿಂದ ಪ್ರವಾಸಿಗರಿಂದಲೇ ಜೀವನ
ಕಟ್ಟಿಕೊಂಡಿರುವ ಸಾಕಷ್ಟು ಮಂದಿ ವ್ಯಾಪಾರಿಗಳಿಗೆ,ಇಲ್ಲಿನ ಸ್ಥಳೀಯ ಫೋಟೋಗ್ರಾಫರ್ಸ್ ಗಳಿಗೆ ಗಳಿಕೆ ಇಲ್ಲದೇ ಜೀವನ ಕಷ್ಟವಾಗಿದ್ದವು.ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕಾದರೆ ಸಡಿಲಿಕೆ ಸಂಪೂರ್ಣ ತೆರವಾದರೆ ಮಾತ್ರ ಸಾಧ್ಯ ಎನ್ನುತ್ತಾರೆ ಇಲ್ಲಿನ ವ್ಯಾಪಾರಿಗಳು.