ಜನ್ಮದಿನದಂದು ಕೊರೋನಾ ನಿಯಮ ಗಾಳಿಗೆ ತೂರಿದ್ರಾ ಸಚಿವ ಶಿವರಾಮ ಹೆಬ್ಬಾರ್?; ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ

ಕಾರವಾರ : ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹಲವು ಕಾರ್ಯಕರ್ತರೊಂದಿಗೆ ಕೋವಿಡ್ ನಿಮಯವನ್ನು ಗಾಳಿಗೆ ತೂರಿ ಜನ್ಮದಿನವನ್ನು ಆಚರಿಸಿಕೊಂಡಿದ್ದು,ವ್ಯಾಪಕ ಟೀಕೆಗೆ ಗುರಿಯಾಗಿದೆ.
ಸಚಿವ ಶಿವರಾಮ ಹೆಬ್ಬಾರ ಅವರ ೬೪ ನೇ ವರ್ಷದ ಜನ್ಮದಿನವನ್ನು ಮನೆಯಲ್ಲಿಯೇ ಆಚರಿಸಲಾಯಿತು. ಹಲವು ಕಾರ್ಯಕರ್ತರು ಹಾಗೂ ಉದ್ಯಮಿಗಳು ಬೇರೆ ಬೇರೆಯಾಗಿಯೇ ಕೇಕ್ ಕತ್ತರಿಸಿ ಜನ್ಮ ದಿನವನ್ನು ಆಚರಿಸಿದರು. ಆದರೆ ಆಚರಣೆಯ ಸಂದರ್ಭದಲ್ಲಿ ಯಾವುದೇ ಸಾಮಾಜಿಕ ಅಂತರವಿಲ್ಲ. ಅದೆಷ್ಟೋ ಕಾರ್ಯಕರ್ತರು ಮಾಸ್ಕ ಸಹ ಹಾಕಿಲ್ಲ.ಇನ್ನಷ್ಟು ಕಾರ್ಯಕರ್ತರು,ಅಭಿಮಾನಿಗಳು ಮಾಸ್ಕನ್ನು ಗಡ್ಡಕ್ಕೆ ಹಾಕಿದ್ದಾರೆ. ಇಂತಹ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ವಿಚಾರ ಸಾರ್ವಜನಿಕರ ಗಮನಕ್ಕೆ ಬರುತ್ತಿದ್ದಂತೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಜಿಲ್ಲೆಯನ್ನು ಪ್ರತಿನಿಧಿಸುವ ಜನಪ್ರತಿನಿಧಿಯೊಬ್ಬರು ಕೊರೋನಾ ಸಂದರ್ಭದಲ್ಲಿ ಇಂತಹ ನಿಷ್ಕಾಳಜಿ ತೋರುವುದು ಎಷ್ಟರ ಮಟ್ಟಿಗೆ ಸರಿ.ಜನಸಾಮಾನ್ಯರು ಇದೇ ರೀತಿ ವರ್ತಿಸಿದ್ರೆ ಅಧಿಕಾರಿಗಳು ದಂಡ ಹಾಕೋದಿಲ್ವೇ ? ಆದರೆ ಸಚಿವರಿಗೆ ದಂಡ ಹಾಕುವವರ್ಯಾರು ? ಲಾಕ್ ಡೌನ್ ಇದ್ದರೂ ಸಚಿವರ ಮನೆಗೆ ಅಭಿಮಾನಿಗಳು, ಉದ್ಯಮಿಗಳು ಹೇಗೆ ಬಂದರು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.