ಕೋವಿಡ್ ಆರೈಕೆ ಕೇಂದ್ರದಲ್ಲಿ ಸಂಗೀತ, ಯೋಗ

ಬಾಗಲಕೋಟೆ: ಕೋವಿಡ್ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆ ಬಾದಾಮಿ ಕೋವಿಡ್ ಆರೈಕೆ ಕೇಂದ್ರದಲ್ಲಿ ಯೋಗ, ಸಂಗೀತ ಕಾರ್ಯಕ್ರಮ ನಡೆಸಲಾಯಿತು.
ಬಾದಾಮಿ ಸೇವಾ ಭಾರತಿ ಟ್ರಸ್ಟ್ ಮತ್ತು ಎಸ್.ವಿ.ಪಿ.ಆಯುರ್ವೇದ ಮಹಾವಿದ್ಯಾಲಯದ ಸಹಯೋಗದಲ್ಲಿ ನಗರದ ಎಸ್.ವಿ.ಪಿ. ಆಯುರ್ವೇದ ಮಹಾವಿದ್ಯಾಲಯದ ಕೋವಿಡ್ ಆರೈಕೆ ಕೇಂದ್ರದಲ್ಲಿ ರೋಗಿಗಳಿಗೆ ಯೋಗ ತರಬೇತಿ, ಸಂಗೀತದ ಹಿತಾನುಭವ, ಅಗ್ನಿಹೋತ್ರ ಹೋಮ, ಆಟಗಳನ್ನಾಡಿಸುವುದು ಮುಂತಾದ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು. ಈಗ ಇರುವ 6 ರೋಗಿಗಳು ಆಸಕ್ತಿಯಿಂದ ಭಾಗವಹಿಸಿದರು.
ಕೋವಿಡ್ ರೋಗಿಗಳು ಆತ್ಮಸ್ಥೈರ್ಯ ಕಳೆದುಕೊಂಡು ಸಾವನ್ನಪ್ಪುತ್ತಿದ್ದಾರೆ. ಈ ವೇಳೆ ಸೋಂಕಿತರಲ್ಲಿ ಮನೋಬಲ, ಆತ್ಮಸ್ಥೈರ್ಯ ಹೆಚ್ಚಿಸುವದಕ್ಕಾಗಿ ಯೋಗ, ಸಂಗೀತ ಕಾರ್ಯಕ್ರಮ ನಡೆಸಿದ್ದು ಸ್ತುತ್ಯಾರ್ಹವಾಗಿತ್ತು.
ಕೋವಿಡ್ ಆರೈಕೆ ಕೇಂದ್ರಕ್ಕೆ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕರ ಸಂಘದ ರಾಜ್ಯಾಧ್ಯಕ್ಷ ಕುಮಾರ ಜಿಗಜಿನ್ನಿ 1 ಆಕ್ಷಿಜನ್ ಕಾನ್ಸಂಟ್ರೇಟರ್ ಹಸ್ತಾಂತರಿಸಿದರು. ಸೇವಾ ಭಾರತಿ ಟ್ರಸ್ಟ ಅಧ್ಯಕ್ಷ ಸಂಜೀವ ಕಾರಕೂನ ಮಾತನಾಡಿ ಇದರ ಸದುಪಯೋಗ ಪಡಿಸಿಕೊಳ್ಳಲು ಮನವಿ ಮಾಡಿದರು. ಲೆಕ್ಕ ಪರಿಶೋಧಕರ ಸಂಘದ ಜಿಲ್ಲಾಧ್ಯಕ್ಷ ಆರ್.ಎಂ.ಮುದ್ರಾ ಮಾತನಾಡಿ ನಮ್ಮ ಸಂಘದ ವತಿಯಿಂದ ರಾಜ್ಯಾದ್ಯಂತ 40 ಆಕ್ಷಿಜನ್ ಕಾನ್ಸಂಟ್ರೇಟರ್ ವಿತರಿಸಿದ್ದು, ನಮ್ಮ ಭಾಗದ ಜನರಿಗೆ ಅನುಕೂಲವಾಗಲೆಂದು ಈ ಆರೈಕೆ ಕೇಂದ್ರಕ್ಕೆ ದೇಣಿಗೆ ನೀಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಎಂ.ಮುಲ್ಕಿಪಾಟೀಲ, ಜಿಲ್ಲಾ ಲೆಕ್ಕಪರಿಶೋಧಕರ ಸಂಘದ ಉಪಾಧ್ಯಕ್ಷ ವೇಣು ಕಾಸಟ, ನಗರದ ಲೆಕ್ಕ ಪರಿಶೋಧಕ ರಾಜು ಮರಿಯಣ್ಣವರ, ನ್ಯಾಯವಾದಿ ಕಿರಣ ಪವಾಡಶೆಟ್ಟರ, ಪ್ರವೀಣ ಹಿರೇಯಂಡಿಗೇರಿ, ಸೇವಾ ಭಾರತಿ ಕಾರ್ಯಕರ್ತರು ಉಪಸ್ಥಿತರಿದ್ದರು. ಮಹೇಶ ಬರಗಿ ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕ ಡಾ.ಗಿರೀಶ ದಾನಪ್ಪಗೌಡರ ವಂದಿಸಿದರು.