ಕನ್ನಡಿಗರ ಋಣ ತೀರಿಸಿದ ಸಾಯಿ ಬ್ರದರ್ಸ್!

ಪೂರ್ಣ ವಿ-ರಾಮ
ಸಾಯಿಕುಮಾರ್, ರವಿಶಂಕರ್ ಹಾಗೂ ಅಯ್ಯಪ್ಪ ಪಿ ಶರ್ಮಾ! ಈ ಮೂವರು ತೆಲುಗಿನವರೇ ಆದರೂ ಬೆಳೆದಿದ್ದ ಕನ್ನಡ ಅನ್ನ ತಿಂದು, ನಟ ಸಾಯಿಕುಮಾರ್ ಅಂತು ಒಂದು ಕಾಲದಲ್ಲಿ ಪೊಲೀಸ್ ಸೀರೀಸ್ ಸಿನೆಮಾಗಳಿಂದ, ಸೀರಿಯಸ್ ಪಾತ್ರಗಳಿಂದಲೇ ಮನೆಮಾತಾದವರು. ಪೊಲೀಸ್ ಸ್ಟೋರಿ ಎಂಬ ಅಗ್ನಿಕುಂಡ ಮಾದರಿಯ ಸಿನೆಮಾ ಇವತ್ತಿಗೂ ಎಲ್ಲರ ಕಣ್ಣಲ್ಲಿ ಕಾಡ್ಗಿಚ್ಚಿನಂತೇ ಉರಿಯುತ್ತಿದೆ. ಸಾಯಿ ಸಹೋದರ ರವಿಶಂಕರ್ ಅವರಿಗೂ ದೊಡ್ಡ ಮಟ್ಟದ ಬ್ರೇಕ್ ಅಂತ ಕೊಟ್ಟಿದ್ದು ಸುದೀಪ್ ಜೊತೆ ನಟಿಸಿದ, ಸುದೀಪ್ ಅವರೇ ಬೆನ್ನು ತಟ್ಟಿ ಬೆಳೆಸಿದ ಕೆಂಪೇಗೌಡ ಚಿತ್ರ. ಇನ್ನೊಬ್ಬ ತಮ್ಮ ಅಯ್ಯಪ್ಪ ಶರ್ಮಾ ಕೂಡ ವರದನಾಯಕ ಎಂಬ ಸಿನೆಮಾ ಡೈರೆಕ್ಟ್ ಮಾಡಿದರು. ಒಂದಷ್ಟು ಕನ್ನಡ ಸಿನೆಮಾದಲ್ಲಿ ನಟಿಸಿದರು. ಮೂವರೂ ಸೇರಿ ಭರಾಟೆ ಎಂಬ ಡಬ್ಬಾ ಚಿತ್ರದಲ್ಲಿ ನಟಿಸಿದರು. ಇವತ್ತಿಗೂ ಬೇರೆ ಬೇರೆ ಆಯಾಮದಲ್ಲಿ, ಆಕೃತಿಯಲ್ಲಿ ಈ ಮೂವರು ಕನ್ನಡ ನೆಲದಲ್ಲಿ ಕೆಲಸ ಮಾಡಿಕೊಂಡು, ದುಡ್ಡು ಮಾಡಿಕೊಂಡು ಆರಾಮಾಗೇ ಇದ್ದಾರೆ!
ಕೋವಿಡ್ ಕಾಲದಲ್ಲಿ ಸಾಯಿಸಹೋದರರ ನೇರ ನೆರವು!
ಇವೆಲ್ಲವೂ ಒಂದು ಕಡೆಯಾದರೆ, ಸಕ್ಸಸ್ ಯಾತ್ರೆ ಇನ್ನೊಂದು ಕಡೆಯಾದರೆ, ಇದೇ ಸಾಯಿ ಸಹೋದರರು ಇದೀಗ ಕನ್ನಡಿಗರ, ಕನ್ನಡ ಕಲಾವಿದರ, ಕಾರ್ಮಿಕರ ನೆರವಿಗೆ ನಿಂತಿದ್ದಾರೆ. ಕಾರ್ಮಿಕರ ಒಕ್ಕೂಟಕ್ಕೆ ಬರೋಬ್ಬರಿ ಐದು ಲಕ್ಷ ರುಪಾಯಿ ಸಹಾಯಧನ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ತಮ್ಮ ಕೈಲಾದಷ್ಟು ಸಹಾಯ ಮಾಡುವ ಮೂಲಕ ಕನ್ನಡಿಗರ ಋಣಭಾರ ಇಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ!
ನಿಜಕ್ಕೂ ಇವರ ಕಾರ್ಯ ಶ್ಲಾಘನೀಯ!
ಕನ್ನಡದ ಅನ್ನವನ್ನೇ ತಿಂದುಕೊಂಡು, ಉಂಡುಕೊಂಡು, ನಿರ್ಮಾಪಕರ ಕಿಸೆಯನ್ನ ಹಿಂಡಿಕೊಂಡು ಓಡಾಡಿಕೊಂಡಿರುವ ಅದೆಷ್ಟೋ ಕನ್ನಡ ಕಲಾವಿದರೇ ಬಡ ಕಾರ್ಮಿಕರ ಸಹಾಯಕ್ಕೆ ಮುಂದಾಗುತ್ತಿಲ್ಲ. ಹಾಗಂತ ಎಲ್ಲರೂ ಎಂದು ನಾವು ಹೇಳುತ್ತಿಲ್ಲ. ಯಶ್-ಸುದೀಪ್-ಶಿವಣ್ಣ-ದರ್ಶನ್-ಪುನೀತ್ ಮೊದಲಾದವರು ಸಹಾಯ ಹಸ್ತ ಚಾಚಿದ್ದಾರೆ. ಚಾಚುತ್ತಲೇ ಇದ್ದಾರೆ.
ಆದರೆ ಕೆಲ ಕೈತುಂಬಾ ದುಡಿಮೆ ಮಾಡಿಕೊಂಡು ಮನೆ ಸೇರಿಕೊಂಡಿರುವ ಕಲಾವಿದರಿಗೆ ಈ ಮಾತು ಹೇಳುತ್ತಿದ್ದೇವೆ. ಅಂಥದ್ದರಲ್ಲಿ ಅಲ್ಲೆಲ್ಲೋ ಆಂಧ್ರದಿಂದ ಬಂದು, ನಮ್ಮಲ್ಲಿ ನೆಲೆ ಹಾಗೂ ಬೆಲೆ ಕಂಡುಕೊಂಡು ಇದೀಗ ಕನ್ನಡ ಕಾರ್ಮಿಕರ ನೆರವಿಗೆ ಮನಸ್ಸು ಮಾಡಿದ್ದಾರಲ್ಲವಾ? ಅಂಥ ಸಾಯಿಕುಮಾರ್ ಸಹೋದರರ ಸಹೃದಯಗುಣಕ್ಕೆ ಶಹಬ್ಬಾಶ್ ಎನ್ನುವುದರಲ್ಲಿ ತಪ್ಪೇನಿದೆ. ನೀವು ಇವತ್ತು ನೀಡಿರುವ ನೆರವನ್ನ ಖಂಡಿತ ಕನ್ನಡ ಚಿತ್ರರಂಗ ಮರೆಯುವುದಿಲ್ಲ. ಇನ್ನೂ ಚೆನ್ನಾಗಿ ಬೆಳೆಯಿರಿ. ಕನ್ನಡ ಚಿತ್ರರಂಗ ಸದಾ ನಿಮ್ಮ ಜೊತೆ ಇರುತ್ತದೆ…